ಹೆದ್ದಾರಿ ಕಾಮಗಾರಿ ಅಪೂರ್ಣ: ಪಡುಬಿದ್ರಿ ಬಂದ್ ಎಚ್ಚರಿಕೆ

Update: 2019-12-12 14:16 GMT

ಪಡುಬಿದ್ರಿ: ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ಅಪೂರ್ಣವಾಗಿದ್ದು, ಜನವರಿ ಮೊದಲ ವಾರದಲ್ಲಿ ಪಡುಬಿದ್ರಿ ಬಂದ್ ನಡೆಸಲು ನಿರ್ಧರಿಸಲಾಗಿದೆ.

ಗುರುವಾರ ಪಡುಬಿದ್ರಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಜತೆಗೂಡಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಪಡುಬಿದ್ರಿಯಲ್ಲಿ ಸರ್ವಿಸ್ ರಸ್ತೆ ಸಹಿತ ಕಲ್ಸಂಕ ಸೇತುವೆ ಕಾಮಗಾರಿಗಳನ್ನು ನವೆಂಬರ್ ತಿಂಗಳಾಂತ್ಯದೊಳಗೆ ನಡೆಸುವುದಾಗಿ ಹೆದ್ದಾರಿ ಚತುಷ್ಪಥ ಗುತ್ತಿಗೆ ಕಂಪನಿ ನವಯುಗ್ ಆಶ್ವಾಸನೆ ನೀಡಿತ್ತು. ಆದರೆ ಈವರೆಗೂ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ನಿತ್ಯ ಸಮಸ್ಯೆ ಉಂಟಾಗುತ್ತಿದೆ. ಈ ಮಧ್ಯೆ ಹೆಜಮಾಡಿ ಟೋಲ್ ಕಡ್ಡಾಯದ ಬೆದರಿಕೆ ಹಾಕುತ್ತಿದೆ. 

ಪಡುಬಿದ್ರಿ ಪಂಚಾಯಿತಿ ಗುರುವಾರ ಗ್ರಾಮದ ಎಲ್ಲಾ ವಾಹನಗಳ ಮಾಲೀಕರು, ರಿಕ್ಷಾ, ಕಾರು, ಟೆಂಪೋ, ಬಸ್ಸು ಚಾಲಕರು ಮಾಲಕರು, ಜೇಸಿಐ, ರೋಟರಿ, ಲಯನ್ಸ್, ಇನ್ನಿತರ ಸಂಘ ಸಂಸ್ಥೆಗಳ ಜತೆಗೆ ಸಮಾಲೋಚನಾ ಸಭೆ ಕರೆದಿತ್ತು.

ಸಭೆಯಲ್ಲಿ ನವಯುಗ ಕಂಪನಿಗೆ ಪತ್ರ ಶೀಘ್ರ ಪತ್ರ ಬರೆದು ಡಿಸೆಂಬರ್ ಅಂತ್ಯದೊಳಗೆ ಪಡುಬಿದ್ರಿಯ ಎಲ್ಲಾ ಹೆದ್ದಾರಿ ಕಾಮಗಾರಿಗಳನ್ನು ಪೂರೈಸಲು ಗಡುವು ನೀಡಲು ನಿರ್ಧರಿಸಲಾಯಿತು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ನಡೆಸದಿದ್ದಲ್ಲಿ ಜನವರಿ ಪ್ರಥಮ ವಾರದಲ್ಲಿ ಪಡುಬಿದ್ರಿ ಬಂದ್ ನಡೆಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷ ವೈ.ಸುಕುಮಾರ್, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News