ಡಿ.16: ಎಸ್‌ಎಫ್‌ಐ-ಡಿವೈಎಫ್‌ಐನಿಂದ ರಾಜ್ಯವ್ಯಾಪಿ ಹೋರಾಟ

Update: 2019-12-19 05:35 GMT

ಮಂಗಳೂರು, ಡಿ.12: ಕೇಂದ್ರ ಸರಕಾರವು ಲೋಕಸಭೆ, ರಾಜ್ಯಸಭೆಗಳಲ್ಲಿ ಮಂಡಿಸಿ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಮಸೂದೆ 2019ನ್ನು ತಿರಸ್ಕರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಸಂಘಟನೆಗಳು ಡಿ.16ರಂದು ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಂಡಿವೆ.

ಈ ಮಸೂದೆ ದೇಶದ ಪೌರತ್ವವನ್ನು ಮತಧರ್ಮದ ಆಧಾರದ ಮೇಲೆ ನಿರ್ಧರಿಸಲಿವೆ ಎಂಬ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಭಾರತವು ಎಲ್ಲ ಮತಧರ್ಮಗಳ ಮತ್ತು ಎಲ್ಲ ಪ್ರದೇಶಗಳ ಜನರ ದೇಶವಾಗಿದೆ. ಭಾರತ ಅವರೆಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಂಘಟನೆ ಆಗ್ರಹಿಸಿವೆ.

ವಿಪರೀತ ತಾರತಮ್ಯ ತೋರುವ ಈ ಮಸೂದೆಯನ್ನು ಲೋಕಸಭೆ ಭಾರೀ ಬಹುಮತದಿಂದ ಹಾಗೂ ರಾಜ್ಯ ಸಭೆಯಲ್ಲಿಯೂ ಮಂಡನೆಯಾಗಿವೆ. ಆದರೆ, ಇದರ ವಿರುದ್ಧ ತೀವ್ರ ಅತೃಪ್ತಿ ಹೊಗೆಯಾಡುತ್ತಿದೆ. ಮಸೂದೆ ಮಂಡನೆ ವೇಳೆ ಈಶಾನ್ಯ ಭಾರತದ ವಿದ್ಯಾರ್ಥಿಗಳು ಬಂದ್ ಆಚರಿಸುತ್ತಿದ್ದಾರೆ. ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಸಂಘಟನೆಗಳು ತಿಳಿಸಿವೆ.

ಮಸೂದೆಯು ನೆರೆಯ ಮೂರು ದೇಶಗಳ ಮುಸ್ಲಿಮರನ್ನು ನಮ್ಮ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದರಿಂದ ಹೊರಗಿಡುತ್ತದೆ. ಪೌರತ್ವದ ದಾಖಲೆ ಒದಗಿಸಲಾಗದ ಭಾರತೀಯ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸಿ ಕ್ಯಾಂಪ್‌ಗಳಿಗೆ ತಳ್ಳುತ್ತದೆ. ಭಾರತದ ಪೌರತ್ವಕ್ಕೆ ಮತಧರ್ಮದ ಪರೀಕ್ಷೆ ಒಡ್ಡಿರುವುದರಿಂದ ಈ ಮಸೂದೆ, ದೇಶದ ಸಂವಿಧಾನದಲ್ಲಿನ ಸಮಾನತೆ ಮತ್ತು ಸೆಕ್ಯುಲರಿಸಂ ಗಳ ನೀತಿಗಳನ್ನು ಉಲ್ಲಂಘಿಸುತ್ತದೆ.

ಇದು ಮುಸಲ್ಮಾನರಲ್ಲಿ ದಾಖಲೆ ಒದಗಿಸಲಾಗದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯನ್ನು ಸೃಷ್ಟಿಸಿದರೆ, ಕೇಂದ್ರ ಸರಕಾರ ಕೇಳುವ ದಾಖಲೆ ಒದಗಿಸಲು 130 ಕೋಟಿ ನಾಗರಿಕರೂ ಧರ್ಮ ಭೇದವಿಲ್ಲದೆ ತೀವ್ರ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ದಾಖಲೆಗಳು ಹೊಂದಿಲ್ಲದ ಆದಿವಾಸಿಗಳು, ಅಲೆಮಾರಿಗಳು, ಬಡವರು ಪೌರತ್ವ ಪಡೆಯಲು ಅಪಾರ ವೇದನೆಗೆ ಗುರಿಯಾಗಬೇಕಾಗುತ್ತದೆ. ಒಟ್ಟಾರೆ ಬಿಜೆಪಿ ಸರಕಾರ ತನ್ನ ಆಡಳಿತ ವೈಫಲ್ಯಗಳಿಂದ ಸೃಷ್ಟಿಯಾಗುತ್ತಿರುವ ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಈ ಕಾಯ್ದೆಯನ್ನು ಮುಂದಕ್ಕೆ ತಂದಿದೆ. ಇದು ಬಿಜೆಪಿಯ ಒಡೆದಾಳುವ ನೀತಿಯ ಮುಂದುವರಿದ ಭಾಗ. ಡಿ.16ರಂದು ರಾಜ್ಯಾದ್ಯಂತ ನಡೆಯುವ ಹೋರಾಟಕ್ಕೆ ಜನತೆ ಬೆಂಬಲಿಸಬೇಕೆಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್ ವಿ., ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News