34 ನೆಕ್ಕಿಲಾಡಿ ಗ್ರಾ.ಪಂ ಸಾಮಾನ್ಯ ಸಭೆ

Update: 2019-12-12 14:43 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಬಾಕಿಯಿದ್ದು, ಯಾರ್ಯಾರು ಎಷ್ಟು ಬಿಲ್ ಬಾಕಿವುಳಿಸಿಕೊಂಡಿದ್ದಾರೆ ಎಂಬ ಬಗ್ಗೆ ಸಮರ್ಪಕ ದಾಖಲೆ ನೀಡಲು ಅಂತಿಮ ಗಡುವು ನೀಡಿದರೂ ಗ್ರಾ.ಪಂ.ನ ನೀರಿನ ಕರ ವಸೂಲಿಗಾರ ಸಿಬ್ಬಂದಿ ವಿಫಲವಾಗಿದ್ದಾರೆ. ಆದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಬರೆಯಲು 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲ ನಿರ್ಣಯ ಕೈಗೊಂಡಿದ್ದಾರೆ.

34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗ್ರಾ.ಪಂ.ಗೆ ಯಾವ್ಯಾವ ನೀರು ಬಳಕೆದಾರರು ಎಷ್ಟು ಕರವನ್ನು ಪಾವತಿಸಲು ಬಾಕಿವುಳಿಸಿಕೊಂಡಿದ್ದಾರೆನ್ನುವ ದಾಖಲೆ ನೀಡಲು ಹೇಳಿದರು. ಆಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿಂದ ಇದೇ ವಿಷಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗುತ್ತದೆ. ಅಂದಿನಿಂದ ಇದರ ಬಗ್ಗೆ ಸಮರ್ಪಕ ದಾಖಲೆ ಒದಗಿಸಲು ಅವರಿಗೆ ಸೂಚಿಸಿ, ಅಂತಿಮ ಗಡುವು ನೀಡಲಾಗಿತ್ತಾದರೂ, ಅವರು ದಾಖಲೆ ನೀಡಲಿಲ್ಲ. ಮತ್ತೆ ಕಳೆದ ತಿಂಗಳು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪವಾಗಿ ನೀರಿನ ಕರ ವಸೂಲಿಗಾರ ಸಿಬ್ಬಂದಿಯೇ ನ.25ರಂದು ಪಟ್ಟಿ ನೀಡುವುದಾಗಿ ಅಂತಿಮ ಗಡುವು ತೆಗೆದುಕೊಂಡಿದ್ದು, ನ.25ರಂದು ನೀರಿನ ಕರ ಬಾಕಿವುಳಿಸಿದವರ ಸಮರ್ಪಕ ದಾಖಲೆ ಒದಗಿಸಲು ನನ್ನಿಂದ ಸಾಧ್ಯವಾಗದಿದ್ದಲ್ಲಿ ಮುಂದಿನ ಶಿಸ್ತು ಕ್ರಮಕ್ಕೆ ತಾನು ಬದ್ಧ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೆ ನ.25 ಕಳೆದರೂ ಅವರು ದಾಖಲೆ ಒದಗಿಸಿಲ್ಲ. ಈ ಬಗ್ಗೆ ಕಾರಣ ಕೇಳಿ ನಾನು ಅವರಿಗೆ ಹಲವು ನೊಟೀಸ್‍ಗಳನ್ನು ಕಳುಹಿಸಿದ್ದೇನೆ. ಆದರೆ ಅದಕ್ಕೂ ಅವರು ಉತ್ತರಿಸಿಲ್ಲ. ಇಂದಿನ ಸಾಮಾನ್ಯ ಸಭೆಗೆ ಕೂಡಾ ದಾಖಲೆ ಒದಗಿಸಿಲ್ಲ. ಇನ್ನು ನಾನೇನು ಮಾಡಲಿ ಎನ್ನುವುದನ್ನು ಆಡಳಿತ ಮಂಡಳಿಯೇ ತೀರ್ಮಾನಿಸಲಿ ಎಂದರು.

ಈ ಸಂದರ್ಭ ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಮಾತನಾಡಿ, 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಬಾಕಿ ಇದೆ. ಇದು ಸಾರ್ವಜನಿಕರ ದುಡ್ಡು. ಅದರ ಲೆಕ್ಕಾಚಾರಗಳು ಸರಿಯಿರಬೇಕು. ಕಳೆದ ನಾಲ್ಕು ತಿಂಗಳಿಂದ ಇದೇ ಬಗ್ಗೆ ಚರ್ಚೆಯಾಗುತ್ತಿದೆ. ಪ್ರತಿ ಸಂದರ್ಭವೂ ಗಡುವು ನೀಡುವುದು. ಆದರೆ ಅದನ್ನು  ಪಾಲಿಸದಿರುವುದು. ಮತ್ತೆ ನಾವು ಗಡುವು ನೀಡುವುದು ಇದೇ ನಡೆಯುತ್ತಿದೆ. ಆದರೂ ಅದರ ಸರಿಯಾದ ಲೆಕ್ಕಪತ್ರ ಮಂಡಿಸಲು ನಿಮ್ಮಿಂದ ಈವರೆಗೆ ಸಾಧ್ಯವಾಗಿಲ್ಲ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಇದರ ಬಗ್ಗೆ ಚರ್ಚೆ ಇಲ್ಲಿಗೆ ಕೊನೆಗೊಳ್ಳಬೇಕು. ಸಾರ್ವಜನಿಕರ ದುಡ್ಡಿನ ಸರಿಯಾದ ಲೆಕ್ಕಚಾರ ನಮಗೆ ಸಿಗಬೇಕು.  ಸಾರ್ವಜನಿಕರ ಹಣದ ಸರಿಯಾದ ಲೆಕ್ಕ ತೋರಿಸದೇ ಬೇಜಾವಬ್ದಾರಿ ತೋರಿರುವ ಸಿಬ್ಬಂದಿಯ ಮೇಲೆ  ಶಿಸ್ತು ಕ್ರಮಕ್ಕೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಬರೆಯಿರಿ ಎಂದು ಸರ್ವಾನುಮತದ ನಿರ್ಣಯಕೈಗೊಂಡರು.

ಪುತ್ತೂರು ನಗರಸಭಾ ವ್ಯಾಪ್ತಿಗೆ 34 ನೆಕ್ಕಿಲಾಡಿಯ ಕುಮಾರಧಾರ ನದಿಯಿಂದ ಕುಡಿಯುವ ನೀರು ಪೂರೈಸಲು ಇದೀಗ ಹೊಸ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.  ಹಲವು ವರ್ಷಗಳ ಹಿಂದಿನಿಂದ ನೆಕ್ಕಿಲಾಡಿಯಿಂದ ಪುತ್ತೂರಿಗೆ ಕುಡಿಯುವ ನೀರು ಸರಬರಾಜಾಗುತ್ತಿದ್ದರೂ 34 ನೆಕ್ಕಿಲಾಡಿಗೆ ಆ ನೀರು ಅವರು ನೀಡುತ್ತಿಲ್ಲ. ಆದ್ದರಿಂದ ಈ ಬಾರಿ ಜಲಸಿರಿ ಯೋಜನೆಯಡಿಯಲ್ಲಿ ಹೊಸ ಪೈಪ್‍ಲೈನ್ ಕಾಮಗಾರಿ ನಡೆಸುವ ಮೊದಲು ನಗರಸಭೆಯವರು 34 ನೆಕ್ಕಿಲಾಡಿಗೂ ಕುಡಿಯುವ ನೀರು ನೀಡುತ್ತೇವೆ ಹಾಗೂ ಪೈಪ್‍ಲೈನ್ ಮಾಡಿಕೊಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಡಬೇಕೆಂದು ನಗರಸಭೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. 

34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಸ್ಥಳ ಲಭ್ಯವಿದ್ದಲ್ಲಿ ಅದನ್ನು ಮುಸ್ಲಿಂ ದಫನಭೂಮಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಬರೆಯಲು ಹಾಗೂ ಗ್ರಾಮದ ಮನೆಗಳನ್ನು ಅಳತೆ ಮಾಡಿ ಮನೆ ತೆರಿಗೆಯನ್ನು ವಿಧಿಸಲು ನಿಯಮ ರೂಪಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಅನಿ ಮಿನೇಜಸ್, ಪ್ರಶಾಂತ್, ಬಾಬು ನಾಯ್ಕ, ಮೈಕಲ್ ವೇಗಸ್, ಶೇಖಬ್ಬ ಎನ್. ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News