ಡಿ.15ರಂದು ಬಾರಕೂರು ನವೀಕೃತ ಚರ್ಚ್‌ನ ಉದ್ಘಾಟನೆ

Update: 2019-12-12 15:19 GMT

ಉಡುಪಿ, ಡಿ.12: ನವೀಕರಿಸಲಾದ ಶತಮಾನಕ್ಕೂ ಹಳೆಯ ಗೋತಿಕ್ ಶೈಲಿಯ ಬಾರಕೂರು ಸಂತ ಪೀಟರ್ ಚರ್ಚ್ ಉದ್ಘಾಟನೆಯು ಡಿ.15ರಂದು ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರು ವಂ.ಫಾ.ಫಿಲಿಪ್ ನೇರಿ ಆರಾನ್ಹಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚ್ ಕಟ್ಟಡವನ್ನು ಭಕ್ತರ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಕಟ್ಟಡ ಸಾಮಾಗ್ರಿಗಳ ಉಪಯೋಗದೊಂದಿಗೆ ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿದೆ. ಈ ಕಾಮಗಾರಿಗೆ ರಾಜ್ಯ ಸರಕಾರದ ಕ್ರಿಶ್ಚಿಯನ್ ಅಭಿವೃದ್ದಿ ಯೋಜನೆಯಡಿ 50ಲಕ್ಷ ರೂ. ಮಂಜೂರಾಗಿದ್ದು, ಒಟ್ಟು ಸುಮಾರು 2ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ ಎಂದರು.

ನವೀಕೃತ ಚರ್ಚ್‌ನ ಆಶೀರ್ವಚನ ಹಾಗೂ ದಿವ್ಯ ಬಲಿಪೂಜೆಯನ್ನು ಸಂಜೆ 3.30ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೆರವೇರಿಸಲಿರುವರು. ಸಂಜೆ 5.30ಕ್ಕೆ ಬಿಷಪ್ ಅಧ್ಯಕ್ಷತೆ ಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಕಾರ್ ಜನರಲ್ ಅತಿ ವಂ.ಬ್ಯಾಪ್ಟಿಸ್ಟ್ ಮಿನೆಜಸ್, ಚಾನ್ಸಲರ್ ಅ.ವಂ.ಸ್ಟ್ಯಾನಿ ಬಿ. ಲೋಬೊ, ವಂ.ಲಾರೆನ್ಸ್ ಡಿಸೋಜ, ಸಿಸ್ಟರ್ ಮೆಟಿಲ್ಡಾ ಮೊಂತೆರೊ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ ಆಸ್ಕರ್ ಫೆರ್ನಾಂಡಿಸ್, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಮಾಜಿ ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಭಾಗವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಎಂ. ಗೊನ್ಸಾಲ್ವಿಸ್, ಕಾರ್ಯದರ್ಶಿ ವಿವೆಟ್ ಲೂವಿಸ್, ಆಯೋಗಗಳ ಸಂಯೋಜಕ ಡೊಲ್ಫಿ ಡಿಸೋಜ, ಸ್ಟ್ಯಾನಿ ಲೂವಿಸ್, ಡೊಲ್ಫಿ ಡಿಲಿಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News