ಉಪ್ಪಿನಂಗಡಿ: ಮಧ್ಯಪ್ರದೇಶದಿಂದ ಬಾಲಕಿಯರ ಅಪಹರಿಸಿದ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

Update: 2019-12-12 15:29 GMT

ಉಪ್ಪಿನಂಗಡಿ: ಮಧ್ಯ ಪ್ರದೇಶದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಉಪ್ಪಿನಂಗಡಿಯ ಪರಿಸರದಲ್ಲಿ ವಾಸ್ತವ್ಯ ಹೂಡಿದ್ದ ಓರ್ವ ಅಪ್ತಾಪ್ತ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಹಾಗೂ ಬಾಲಕಿಯರನ್ನು ಉಪ್ಪಿನಂಗಡಿ ಪೊಲೀಸರ ಸಹಾಯದಿಂದ ಪತ್ತೆ ಹಚ್ಚಿದ ಮಧ್ಯಪ್ರದೇಶ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಬಸಂತ್ ಸಿರ್ಸಾಗೆ (21) ಎಂಬಾತ ತನ್ನ ಸಹಚರ ಹದಿನೇಳರ ಹರೆಯದ ಬಾಲಕನೊಂದಿಗೆ ಸೇರಿಕೊಂಡು ತನ್ನ ಊರಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ್ದರು. ಅವರನ್ನು ಉಪ್ಪಿನಂಗಡಿಗೆ ಕರೆದುಕೊಂಡು ಬಂದ ಆರೋಪಿಗಳು ಇಲ್ಲಿ ಕಾರ್ಮಿಕರಾಗಿ ದುಡಿದುಕೊಂಡು ಇಲ್ಲೇ ವಾಸ್ತವ್ಯವಿದ್ದ ತಮ್ಮ ಸ್ನೇಹಿತರ ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಬಾಲಕಿಯರ ನಾಪತ್ತೆ ಪ್ರಕರಣದ ಜಾಡು ಹಿಡಿದ ಮಧ್ಯಪ್ರದೇಶ ಪೊಲೀಸರಿಗೆ ಬಾಲಕಿಯರು ಉಪ್ಪಿನಂಗಡಿ ಪರಿಸರದಲ್ಲಿ ಇರುವ ಸುಳಿವು ದೊರೆತ್ತಿದ್ದು, ಬಳಿಕ ಉಪ್ಪಿನಂಗಡಿ ಪೊಲೀಸರ ಸಹಾಯ ಪಡೆದ ಮಧ್ಯಪ್ರದೇಶ ಪೊಲೀಸರು ಇಲ್ಲಿಗೆ ಬಂದು ಇಲ್ಲಿನ ಕಡವಿನ ಬಾಗಿಲಿನ ಬಳಿಯ ಬಾಡಿಗೆ ಕೊಠಡಿಯೊಂದರಲ್ಲಿ ವಾಸ್ತವ್ಯ ಮಾಡುತ್ತಿದ್ದ ಇಬ್ಬರು ಆರೋಪಿಗಳು ಸಹಿತ ಅಪಹರಣಕ್ಕೀಡಾದ ಬಾಲಕಿಯರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News