ಸಂಸ್ಕೃತ ಭಾಷೆಯ ಅಧ್ಯಯನದಿಂದ ಸಂಸ್ಕೃತಿ ಉಳಿವು: ಪೇಜಾವರ ಶ್ರೀ

Update: 2019-12-12 15:44 GMT

ಉಡುಪಿ, ಡಿ.12: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದರೆ ಸಂಸ್ಕೃತ ಭಾಷೆಯ ಅಧ್ಯಯನದಿಂದ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಉಳಿಯಲು ಸಾಧ್ಯ. ಚೈತನ್ಯದಂತೆ ಇರುವ ಸಂಸ್ಕೃತಿ ಹಾಗೂ ದೇಹದಂತೆ ಇರುವ ಸಂಸ್ಕೃತವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಸಂಸ್ಕೃತ ಕಾಲೇಜಿನ ನವೀಕೃತ ಹಾಗೂ ವಿಸ್ತೃತ ಕಟ್ಟಡವನ್ನು ಗುರುವಾರ ಉದ್ಘಾಟಿಸಿ, ನಂತರ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್ತುಗಳು ಕೂಡ ಸಂಸ್ಕೃತದ ಆಕಾರಗಳಾಗಿವೆ. ಆದುದರಿಂದ ಸಂಸ್ಕೃತ ಭಾಷೆಯ ಅಧ್ಯಯನದಿಂದ ಈ ನೆಲದ ಸಂಸ್ಕೃತಿಯನ್ನು ಅರಿಯಬಹುದಾಗಿದೆ. ಅಷ್ಟಮಠಗಳ ಸಂಪತ್ತು ಆಗಿರುವ ಕೃಷ್ಣಮಠ ಹಾಗೂ ಸಂಸ್ಕೃತ ಪಾಠಶಾಲೆಯನ್ನು ಉಳಿಸಿ ಬೆಳೆಸುವುದು ಅಷ್ಟಮಠಗಳ ಜವಾಬ್ದಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಆಡಳಿತದಲ್ಲಿರುವ ಸರಕಾರ ಇಂದು ಸಂಸ್ಕೃತ ಭಾಷೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಇದು ಸಂಸ್ಕೃತ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಗಿರೀಶಚಂದ್ರ ಮಾತನಾಡಿ, ಬೆಂಗಳೂರಿನ ತಿಪ್ಪಸಂದ್ರ ಸಮೀಪದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ನೂರು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣ 369 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪಲಿ ಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಸಂಸ್ಕೃತ ವಿವಿಯ ಕುಲಸಚಿವ ಡಾ.ವೀರನಾರಾಯಣ ಪಾಂಡುರಂಗಿ, ಉದ್ಯಮಿಗಳಾದ ರಾಮ ದಾಸ್ ಮಡಮಣ್ಣಾಯ, ಬಿ.ಲಕ್ಷ್ಮೀಕಾಂತನ್, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ, ಬೆಂಗಳೂರಿನ ಕೂಟ ಮಹಾಜಗತ್ತು ಅಧ್ಯಕ್ಷ ಶ್ರೀಧರ ಮಯ್ಯ, ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಶ್ಯಾಮ್ ಭಟ್, ಉದ್ಯಮಿ ವಾಸುದೇವ ಭಟ್, ವಿದ್ವಾಂಸ ಪದ್ಮನಾಭ ಶರ್ಮಾ, ಮಂಜು ನಾಥ ಭಟ್, ರತ್ನಕುಮಾರ್, ಕೆ.ಪದ್ಮನಾಭ ಭಟ್, ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.

ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿ ದರು. ಪ್ರಾಧ್ಯಾಪಕ ಡಾ.ಶಿವಪ್ರಸಾದ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News