ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಅಗತ್ಯ: ಪ್ರಮೋದ್ ಮಧ್ವರಾಜ್

Update: 2019-12-12 15:46 GMT

ಉಡುಪಿ, ಡಿ.12: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಹಾಗೂ ವೈಫಲ್ಯತೆಯನ್ನು ಪ್ರತಿಭಟಿಸಿ ಪಕ್ಷದ ಕಾರ್ಯಕರ್ತರು ಜನ ಜಾಗೃತಿಗೊಳಿಸುವ ಕಾರ್ಯ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸಂಘಟಿತ ಪ್ರಯತ್ನಕ್ಕೆ ನಾನು ಬದ್ಧವಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ಜರಗಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಪಕ್ಷದ ವಿವಿಧ ಘಟಕಗಳ ಕಾರ್ಯಕರ್ತರಿಗೆ ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಪಕ್ಷದ ಕಾರ್ಯಕರ್ತರನ್ನು ಮುಂಬರುವ ಪಂಚಾ ಯತ್ ಚುನಾವಣೆಗೆ ಸಜ್ಜುಗೊಳಿಸಲು ಕಾರ್ಯಕರ್ತರು ಬೆಂಬಲ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮಾತನಾಡಿ, ಬ್ಲಾಕ್‌ಗೆ ಸಂಬಂಧಪಟ್ಟ ಗ್ರಾಪಂಗಳಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ಮೂಲಕ ಪ್ರಮೋದ್ ಮಧ್ವರಾಜ್‌ರವರ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿ ಈಗ ಪೂರ್ಣಗೊಳ್ಳುತ್ತಿರುವ ಕಾಮಗಾರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲು ಪಕ್ಷ ಬದ್ಧ ಎಂದು ತಿಳಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ದಿವಾಕರ್ ಕುಂದರ್, ಕೃಷ್ಣ ಹೆಬ್ಬಾರ್, ಪ್ರಕಾಶ್ ಜಿ.ಕೊಡವೂರು, ಗಣೇಶ್‌ರಾಜ್ ಸರಳೇಬೆಟ್ಟು, ಅಣ್ಣಯ್ಯ ಶೇರಿ ಗಾರ್, ಸುಲೋಚನಾ ದಾಮೋದರ್ ಮೊದಲಾದವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಎಸ್.ಟಿ. ಘಟಕ ಅಧ್ಯಕ್ಷ ಅನಂತ್ ನಾಯ್ಕಾ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷರು ಪ್ರಶಾಂತ್ ಪೂಜಾರಿ, ಸೇವಾದಳದ ಬ್ಲಾಕ್ ಅಧ್ಯಕ್ಷ ರಾಜೇಶ್ ನಾಯ್ಕಾ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News