ಸಜಿಪಮುನ್ನೂರು: ಮತ್ತೊಂದು ರೇಚಕ ಸ್ಥಾವರ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

Update: 2019-12-12 17:19 GMT

ಬಂಟ್ವಾಳ, ಡಿ. 12: ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮ ಆಲಾಡಿ ಎಂಬಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಗಳೂರು ಉಪವಿಭಾಗವು ಮತ್ತೊಂದು ನೂತನ ರೇಚಕ ಸ್ಥಾವರ (ಜಾಕ್‍ವೆಲ್) ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಜಿಪಮುನ್ನೂರು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಂಗಳೂರು ಉಪವಿಭಾಗವು ನೂತನ ರೇಚಕ ಸ್ಥಾವರ (ಜಾಕ್‍ವೆಲ್) ಹಾಗೂ ಪಂಪ್ ನಿರ್ಮಾಣದ ತಯಾರಿಯಲ್ಲಿದ್ದು, ಇಲ್ಲಿಂದ ಮಂಗಳೂರಿನ ಉಳ್ಳಾಲ, ಕೋಟೆಕಾರ್ ಸಹಿತ ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದ್ದು, ಈ ಯೋಜನೆಗೆ ವಿವಿಧ ಸಂಘಟನೆಗಳು ಸಹಿತ ಸಾರ್ವಜನಿಕರು ಭಾರೀ ವಿರೊಧ ವ್ಯಕ್ತಪಡಿಸಿದ್ದಾರೆ.

ವಿರೋಧಕ್ಕೆ ಕಾರಣವೇನು?:
ತಾಲೂಕಿಗೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅಧಿಕಾರವಧಿಯಲ್ಲಿ ಬಂಟ್ವಾಳ ತಾಲೂಕಿಗೆ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿತ್ತು. ಈ ಪೈಕಿ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಕರೋಪಾಡಿ ಕುಡಿಯುವ ನೀರಿನ ಯೋಜನೆಯು ಕೂಡಾ ಅನುಷ್ಠಾನಗೊಂಡಿದ್ದು, ಇದರ ಕುಡಿಯುವ ನೀರಿನ ರೇಚಕ ಸ್ಥಾವರನ್ನು ಸಜಿಪಮುನ್ನೂರಿನ ಆಲಾಡಿಯಲ್ಲಿ ಸ್ಥಾಪನೆ ಮಾಡಿ ಅಲ್ಲಿಂದಲೇ ನೀರಿನ್ನು ಲಿಫ್ಟ್ ಮಾಡಲಾಗುತ್ತಿದೆ. ಕರೋಪಾಡಿ ಯೋಜನೆಯಲ್ಲಿ ಸಜಿಪಮುನ್ನೂರು ಗ್ರಾಮಕ್ಕೂ ಶುದ್ಧ ನೀರಿನ ಸೌಲಭ್ಯ ಕಲ್ಪಿಸಲಾಗುವುದಾಗಿ ಅಂದಿನ ಯೋಜನೆಯ ರೂಪೀಕರಣದಲ್ಲಿ ತಿಳಿಸಲಾಗಿತ್ತೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಅದಲ್ಲದೆ, ಯೋಜನೆ ಪೂರ್ಣಗೊಂಡ ಬಳಿಕ ಸಜಿಪಮುನ್ನೂರು ಗ್ರಾಮಕ್ಕೆ ನೀರು ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕಾಮಗಾರಿ ಪುರ್ಣಗೊಂಡ ಬಳಿಕ ಗ್ರಾಮವನ್ನು ಕೈಬಿಟ್ಟಿರುವುದಕ್ಕೆ ಗ್ರಾಮಸ್ಥರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಬೇಡಿಕೆಗಳೇನು?:
ಸಜಿಪಮುನ್ನೂರಿನಲ್ಲಿ ರೇಚಕ ಸ್ಥಾವರ ಸ್ಥಾಪನೆ ಮಾಡುವುದಾದಲ್ಲಿ ಮೊದಲು ನಮ್ಮ ಗ್ರಾಮಕ್ಕೆ ಶುದ್ದೀಕರಿಸಿದ ನೀರು ಸರಬರಾಜು ಮಾಡಬೇಕು. ಕಾಮಗಾರಿಯ ವೇಳೆ ಸಂಪರ್ಕ ರಸ್ತೆ ಹಾಘೂ ಚರಂಡಿಗಳಿಗೆ ಯಾವುದೇ ಹಾನಿಯಾದರೆ ಅದನ್ನು ಸರಿಪಡಿಸಬೇಕು. ನೀರು ಒದಗಿಸುವ ವಿಚಾರವಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿ ಅವರು ಸಜಿಪಮುನ್ನೂರು ಗ್ರಾಮದ ಪಿಡಿಒ ಅವರಿಗೆ ಕಾನೂನಾತ್ಮಕ ಧೃಢ ಪತ್ರವನ್ನು ಬರೆದು ಕೊಡಬೇಕು. ನಮ್ಮ ಈ ಬೇಡಿಕೆಗಳನ್ನು ಈಡೇರಿಸಿದ್ದಲ್ಲಿ ಕಾಮಗಾರಿಗೆ ತಡೆ ಮಾಡುವುದಾಗಿ ಹಾಗೂ ಯೋಜನೆಯಿಂದ ಮತ್ತೆ ಗ್ರಾಮ ಹೊರಗುಳಿದರೆ ನೀರಿಗಾಗಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮನವಿ:
ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ನೂತನ ರೇಚಕ ಸ್ಥಾವರ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ರಾಮಸ್ಥರಾದ ಸಲೀಂ ಆಲಾಡಿ, ಮಾಲಿಕ್ ಕೊಳಕೆ, ಖಲೀಲ್ ಆಲಾಡಿ, ಶಾಫಿ ಆಲಾಡಿ ನಿಯೋಗವು ಜಿಲ್ಲಾಧಿಕಾರಿ, ಬಂಟ್ವಾಳ ತಹಶೀಲ್ದಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಟ್ವಾಳ, ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದೆ.

ಇಲಾಖೆ ಏನು ಹೇಳುತ್ತಿದೆ?:
ಉಳ್ಳಾಲ ನಗರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಶಿಕ್ಷಣ ಸಂಸ್ಥೆಗಳು ಹಾಗೂ ಮಾರ್ಗ ಮಧ್ಯೆ ಬರುವ ಗ್ರಾಮಗಳಾದ ಸಜಿಪಮುನ್ನೂರು, ಸಜಿಪ ಮೂಡ, ಸಜಿಪ ಪಡು, ಸಜಿಪನಡು, ಇರಾ, ಚೇಳೂರು, ಬೊಳಿಯಾರ್, ಕುರ್ನಾಡು, ಬಾಳೆಪುಣಿ, ಪಾವೂರು, ಮಂಜನಾಡಿ, ನರಿಂಗಾನ, ಕೈರಂಗಳ, ಪಜೀರು, ಸೋಮೇಶ್ವರ, ಕೊಣಾಜೆ, ಬೆಳ್ಮ, ಅಂಬ್ಲಮೊಗರು, ಹರೇಕಳ, ಮುನ್ನೂರು, ಕಿನ್ಯ, ತಲಪಾಡಿ, ಮಂಚಿ, ವೀರಕಂಭ, ಬೋಳಂತೂರು ಗ್ರಾಮಗಳು ಫಲಾನುಭವಿಗಳಾಗಿರುತ್ತಾರೆ. ಈ ಯೋಜನೆಯಡಿ ಆಲಾಡಿ ಎಂಬಲ್ಲಿ ಜ್ಯಾಕ್‍ವೆಲ್, ಪಂಪ್‍ಹೌಸ್ ಹಾಗೂ ಕೈರಂಗಳ ಎಂಬಲ್ಲಿ 60 ಎಂಎಲ್‍ಡಿ ಸಾಮಥ್ರ್ಯದ ಜಲಶುದ್ಧೀಕರಣ ಘಟಕ ನಿರ್ಮಾಣ ಮಾಡುವುದಾಗಿ ಸಜಿಪಮುನ್ನೂರು ಗ್ರಾಪಂ ಪಿಡಿಒ ಅವರಿಗೆ ಪತ್ರ ನೊಟಿಸ್ ಕಳುಹಿಸಿ ಮಾಹಿತಿ ನೀಡಿರುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನೀಯರ್ ಶೋಭಾಲಕ್ಷ್ಮೀ ಅವರು "ವಾರ್ತಾಭಾರತಿ"ಗೆ ಮಾಹಿತಿ ನೀಡಿದ್ದಾರೆ.

ಸಜಿಪ ವ್ಯಾಪ್ತಿಯ ನೇತ್ರಾವತಿಯಲ್ಲಿ ಸಾಕಷ್ಟು ಪ್ರಮಾಣದ ನೀರಿದ್ದು, ನಮಗೆ ನೋಡುವ ಭಾಗ್ಯ ಮಾತ್ರ ಸಿಕ್ಕಿದೆ. ಇಲ್ಲಿಂದ ಶುದ್ಧ ಕುಡಿಯುವ ನೀರನ್ನು ತಾಲೂಕಿನ ಇತರ ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ, ನಮ್ಮ ಗ್ರಾಮಸ್ಥರಿಗೆ ಶುದ್ಧೀಕರಿಸಿದ ನೀರು ಸಿಗುತ್ತಿಲ್ಲ. ಇಲ್ಲಿನ ಗ್ರಾಮಸ್ಥರಿಗೆ ನದಿಯಿಂದ ನೇರವಾಗಿ ನೀರು ಒದಗಿಸುತ್ತಿದೆ. ಈ ನೀರು ಕುಡಿಯಲು ಅಯೋಗ್ಯವಾಗಿದೆಂದು ಆರೋಗ್ಯ ಇಲಾಖೆ ತಿಳಿಸಿದೆ.
-ಸಲೀಂ ಆಲಾಡಿ, ಸಾಮಾಜಿಕ ಹೋರಾಟಗಾರ

ಈ ಯೋಜನೆಯ ಬಗ್ಗೆ ಇಲಾಖೆಯು ಗ್ರಾಮ ಪಂಚಾಯತ್‍ಗೆ ಯಾವುದೇ ಮಾಹಿತಿ ನೀಡಿಲ್ಲ. ಡಿ. 10ರಂದು ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದ್ದು, ಯೋಜನೆಯ ಸ್ಪಷ್ಟ ಮಾಹಿತಿ ನೀಡುವಂತೆ ಹಾಗೂ ಕಾಮಗಾರಿಯನ್ನು ಮುಂದುವರಿಸಿದಂತೆ ತಡೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳೊಂದಿಗೆ ದೂರಲಾಗಿದ್ದು, ಮಾತುಕತೆಯ ಬಳಿಕ ಕಾಮಗಾರಿಯ ರೂಪುರೇಷೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.
-ಮುಹಮ್ಮದ್ ಶರೀಫ್ ನಂದಾವರ, ಸಜಿಪಮುನ್ನೂರು ಗ್ರಾಪಂ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News