ಶತಮಾನದ ಇತಿಹಾಸ ಹೊಂದಿರುವ ಪರೀಕ ಅರಮನೆ ಕಂಬಳ

Update: 2019-12-12 16:10 GMT

ಪರ್ಕಳ, ಡಿ.12: ನೂರು ವರ್ಷಗಳಿಗೂ ಅಧಿಕ ಇತಿಹಾಸವಿರುವ ಪರೀಕ ಅರಮನೆ ದೈವದ ಕಂಬಳವು ಬುಧವಾದ ಇಲ್ಲಿಗೆ ಸಮೀಪದ ಪರೀಕ ಅರಮನೆ ಕಂಬಳ ಗದ್ದೆ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಬಾರಿ ಕಂಬಳದಲ್ಲಿ 40ಕ್ಕೂ ಅಧಿಕ ಜೋಡಿ ಕೋಣಗಳು ಓಡಿದವು.

ಜೈನರ ಆಡಳಿತದಲ್ಲಿ ಪರೀಕ ಅರಮನೆ 19ನೇ ಶತಮಾನದಲ್ಲಿ ಬಂಟ ಮನೆತನದ ಆಡಳಿತಕ್ಕೆ ಬಂತು. 1913ರಲ್ಲಿ ಈಗಿನ ಪರೀಕ ಅರಮನೆ ಕಟ್ಟಿದ ಯೋಜನಾಗಂಧಿ ಹೆಗ್ಗಡ್ತಿ ಅವರು ಇಲ್ಲಿ ಕುಟುಂಬದ ಸಾಂಪ್ರದಾಯಿಕ ದೈವದ ಕಂಬಳವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಇಲ್ಲಿ ಅರಮನೆ ಕಂಬಳ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಕಂಬಳಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ 2016-17ರಲ್ಲಿ ಅರಮನೆ ಕುಟುಂಬದ ಕೋಣನ ಜೋಡಿಯನ್ನು ಗದ್ದೆಗೆ ಇಳಿಸಿ ಒಂದು ಸುತ್ತು ನಡೆಸಿ ಸಂಪ್ರದಾಯವನ್ನು ಕಾಪಾಡಿದ್ದೇವೆ ಎಂದು ಜಿಲ್ಲಾ ಕಂಬಳ ಸಮಿತಿಯ ಸದಸ್ಯರೂ, ಕಂಬಳದ ತೀರ್ಪುಗಾರರೂ ಆದ ವಿಜಯಕುಮಾರ್ ಕಂಗಿನಮನೆ ಕಂಬಳದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೀಗ ಕಂಬಳವು ಕುಟುಂಬದ ಯಜಮಾನರಾದ ಚಿತ್ತರಂಜನ್ ರೈ ಹಾಗೂ ಜಯಂತಿ ರೈ ಅವರ ಹಿರಿತನದಲ್ಲಿ ಕುಟುಂಬದ ಸರ್ವಸದಸ್ಯರ ಪಾಲ್ಗೊಳ್ಳುವಿಕೆ ಯೊಂದಿಗೆ ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 70ಕ್ಕೂ ಅಧಿಕ ಸಾಂಪ್ರದಾಯಿಕ ದೈವ-ದೇವರ ಕಂಬಳಗಳು ಆಯಾ ಕುಟುಂಬಗಳ ಜಮೀನಿನಲ್ಲಿ ನಡೆಯುತ್ತದೆ ಎಂದವರು ವಿವರಿಸಿದರು.

ರಾಜ್ಯದ ಕರಾವಳಿ ಭಾಗದಲ್ಲಿ ಕಂಡುಬರುವ ಕಂಬಳ ಎಂಬುದು ಕೇವಲ ಕ್ರೀಡೆಯಲ್ಲ. ಅದು ತುಳುವರ ಕೃಷಿ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ರೈತರ, ಮಣ್ಣಿನ ಮಕ್ಕಳ ದೈವ-ದೇವತಾರಾಧನೆಯ ಭಾಗವಾಗಿ ಕಂಬಳವನ್ನು ಸಾಂಪ್ರದಾಯಿಕ ರೀತಿಯಲ್ಲಿ ಈಗಲೂ ಶೃದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಕಂಬಳವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬರಲು ಸರಕಾರದ ಪ್ರೋತ್ಸಾಹ ಅಗತ್ಯವಾಗಿದೆ ಎಂದು ವಿಜಯಕುಮಾರ್ ತಿಳಿಸಿದರು.

ಕೋಣಗಳಿಗೆ ಬಹುಮಾನ: ಇಂಥ ಸಾಂಪ್ರದಾಯಿಕವಾಗಿ ನಡೆಯುವ ಕಂಬಳಗಳಲ್ಲಿ ಸ್ಪರ್ಧೆಗಳಿರುವುದಿಲ್ಲ. ಕಂಬಳದಲ್ಲಿ ಭಾಗವಹಿಸುವ ಕಂಬಳದ ಜೋಡಿಯಲ್ಲಿ ಅತ್ಯಂತ ವೇಗವಾಗಿ ಗುರಿಮುಟ್ಟುವ ಕೋಣಗಳ ಜೋಡಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಮೊದಲ ಬಹುಮಾನ 4ಗ್ರಾಂ ಚಿನ್ನ, ಎರಡನೇ ಬಹುಮಾನ ಎರಡು ಗ್ರಾಂ ಚಿನ್ನವನ್ನು ನೀಡಲಾಗುತ್ತದೆ. ಇದನ್ನು ಹೆಚ್ಚೆಚ್ಚು ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ನೀಡಲಾಗುತ್ತದೆ ಎಂದರು.

ಈ ಬಾರಿಯ ಪರೀಕ ಅರಮನೆ ಕಂಬಳದಲ್ಲಿ 40ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದವು. ಇವುಗಳನ್ನು ಸೀನಿಯರ್, ಜೂನಿಯರ್ ಹಾಗೂ ಸಣ್ಣ ಕೋಣಗಳ ವಿಭಾಗಗಳಾಗಿ ಮಾಡಲಾಗುತ್ತದೆ. ಸೀನಿಯರ್ ಮತ್ತು ಜೂನಿಯರ್‌ನ ಮೊದಲೆರಡು ಸ್ಥಾನಿಗಳಿಗೆ ಚಿನ್ನದ ಬಹುಮಾನವಿದ್ದರೆ, ಸಣ್ಣ ಕೋಣನ ವಿಭಾಗದಲ್ಲಿ 5 ಮತ್ತು 3ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ 18ಪಟ್ಟಿಯಲ್ಲಿರುವ ಸ್ಪರ್ಧಾ ಕಂಬಳಗಳು, 70ರಷ್ಟು ಸಾಂಪ್ರದಾಯಿಕ ದೈವ-ದೇವರ ಕಂಬಳಗಳು ನಡೆಯುತ್ತವೆ. ಒಂದೆರಡು ಕಂಬಳವನ್ನು ಹೊರತು ಪಡಿಸಿದರೆ ಬಹುಪಾಲು ಸಾಂಪ್ರದಾಯಿಕ ಕಂಬಳಗಳು ಉಡುಪಿ ಜಿಲ್ಲೆಯಲ್ಲೇ ನಡೆಯುತ್ತವೆ. ಇವುಗಳು ಹೆಚ್ಚಾಗಿ ನವೆಂಬರ್-ಡಿಸೆಂಬರ್‌ನ ಕೋಡಿ ತಿಂಗಳಲ್ಲಿ ನಡೆಯುತ್ತವೆ ಎಂದು ವಿಜಯಕುಮಾರ್ ತಿಳಿಸಿದರು.

‘ಮುಂದಿನ ವರ್ಷದಿಂದ ಪರೀಕ ಕಂಬಳವನ್ನೂ ಸ್ಪರ್ಧಾ ಕಂಬಳವಾಗಿ ನಡೆಸಲು ಪ್ರಯತ್ನಗಳು ನಡೆದಿವೆ. ಆಗ ಇಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ’ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದರು.

ಹಿಂದೆಲ್ಲಾ ನಟ್ಟಿ ನಡುವ ಗದ್ದೆಯನ್ನು ಹದಗೊಳಿಸಲು ಊರ ಮತ್ತು ಪರಊರಿನ 40-50 ಜೊತೆಕೋಣಗಳು ಓಡುವುದರಿಂದ ಗದ್ದೆಯ ಮಣ್ಣು ಹದವಾಗಿ ಸಿದ್ಧಗೊಂಡು ಒಳ್ಳೆಯ ಫಸಲು ಬರುತ್ತಿತ್ತು. ಹೀಗೆ ಕಂಬಳ ಪ್ರಾರಂಭ ಗೊಂಡಿರಬೇಕು. ಮುಂದೆ ಇದು ಅನ್ನದಾನ, ಸಹಭೋಜನ ದೊಂದಿಗೆ ಊರ ಜಾತ್ರೆಯ ಸ್ವರೂಪ ಪಡೆದಿರಬಹುದು. ಇಂಥ ದೈವ-ದೇವರ ಕಂಬಳದ ದಿನ ಇಡೀ ಕುಟುಂಬದ ಸದಸ್ಯರು ಒಟ್ಟು ಸೇರುವ ಸಂಪ್ರದಾಯವೂ ಇದೆ. ಸಾವಯವ ಕೃಷಿಗೂ ಕಂಬಳ ಪೂರಕವಾಗಿದೆ ಎಂದು ವಿಜಯಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಪರೀಕ ಅರಮನೆಯ ಈಗಿನ ಯಜಮಾನರಾದ ಚಿತ್ತರಂಜನ್ ರೈ, ಕುಟುಂಬದ ಸುಫಲ್‌ಚಂದ್ರ ರೈ, ಪ್ರಭಾತ್ ರೈ, ಪಿ.ಆರ್. ಶೆಟ್ಟಿ, ಲೋಕೇಶ್ ಶೆಟ್ಟಿ ಮುಚ್ಚೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News