ಸಂವಿಧಾನ ವಿರೋಧಿ ಬ್ಯಾನರ್: ಸಂಘಪರಿವಾರ ವಿರುದ್ಧ ಕ್ರಮ ಜರಗಿಸಲು ಎಸ್ಡಿಪಿಐ ಆಗ್ರಹ

Update: 2019-12-12 17:48 GMT

ಮಂಗಳೂರು: 'ಹಿಂದೂ ಐಕ್ಯತೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ' ಎಂಬ ಬ್ಯಾನರ್ ನಡಿಯಲ್ಲಿ ಸಂಘಪರಿವಾರವು ಹಿಂದು ರಾಷ್ಟ್ರ ಜಾಗೃತಿ ಸಭೆ ಎಂಬ ಹೆಸರಿಟ್ಟು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾತಿ ಧರ್ಮದ ಮಧ್ಯೆ ವೈಷಮ್ಯ ಮೂಡಿಸಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದೆ ಎಂದು ಎಸ್ಡಿಪಿಐ ಆರೋಪಿಸಿದೆ.

ಈ ಹಿಂದೆಯು ಕೂಡ ಸಂಘಪರಿವಾರದ ಸಂಘಟನೆಗಳು ಹಿಂದೂ ರಾಷ್ಟ್ರ ಎಂದು ಬ್ಯಾನರ್ ಗಳಲ್ಲಿ ಮುದ್ರಿಸಿ ನಗರದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿತ್ತು. ನಂತರ ಎಸ್ಡಿಪಿಐಯ ಮನವಿಯ ಮೇರೆಗೆ ಆ ಸಂದರ್ಭಗಳಲ್ಲಿ ಬ್ಯಾನರ್ ಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ ಆ ಸಮಯದಲ್ಲಿ ಕಠಿಣ ಕ್ರಮ ಜರಗಿಸದೇ ಇದ್ದ ಕಾರಣದಿಂದ ಹಿಂದೂ ರಾಷ್ಟ್ರವೆಂಬ ಸಂವಿಧಾನ ವಿರೋಧಿ ಪದಗಳನ್ನು ಸಂಘಪರಿವಾರ ಮತ್ತೆ ಮತ್ತೆ ಪುನರಾವರ್ತನೆ ಮಾಡುತ್ತಲೇ ಇದೆ ಎಂದು ದೂರಿದೆ.

ಸಂವಿಧಾನ ವಿರೋಧಿ ಘಟನೆಗಳು ನಡೆಯುವಾಗ ಎಸ್ಡಿಪಿಐ ಗೆ ಮೌನವಹಿಸಿ ಸುಮ್ಮನಿರಲು ಸಾಧ್ಯವಿಲ್ಲ. ಬದಲಿಗೆ ಸಂವಿಧಾನ ಬದ್ದವಾಗಿ ಮತ್ತು ಕಾನೂನು ರೀತಿಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಎಸ್ಡಿಪಿಐ ಎಚ್ಚರಿಸಿದೆ.

ಸಜಿಪನಡುವಿನಲ್ಲಿ ಡಿಸೆಂಬರ್ 15 ಕ್ಕೆ ಸಂಘಪರಿವಾರ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಸಂವಿಧಾನ ವಿರೋಧಿ ಕಾರ್ಯಕ್ರಮ 'ಹಿಂದೂ ರಾಷ್ಟ್ರ ಜಾಗೃತಿ' ಸಭೆಯನ್ನು ನಿಲ್ಲಿಸಬೇಕು. ಅಲ್ಲಲ್ಲಿ ರಾರಾಜಿಸುತ್ತಿರುವ ಹಿಂದೂ ರಾಷ್ಟ್ರಸ್ಥಾಪನೆಯ ಕೋಮು ಪ್ರಚೋಧನಕಾರಿ ಬ್ಯಾನರ್ ಗಳನ್ನು ತೆರವುಗೊಳಿಸಬೇಕು. ಸಂವಿಧಾನ ವಿರೋಧಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಆಯೋಜಕರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ನಮ್ಮ ಪಕ್ಷವು ಇದರ ವಿರುದ್ಧವಾಗಿ ತೀವ್ರತರವಾದ ಹೋರಾಟವನ್ನು ನಡೆಸಲಿದೆ ಎಂದು ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News