ಉಡುಪಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತಿವೆ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು

Update: 2019-12-13 13:46 GMT

ಉಡುಪಿ, ಡಿ.13:ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಹಂತದಲ್ಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ,ಅವರನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಪ್ರೇರೇಪಿಸಲು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನೀತಿ ಆಯೋಗದ ಮೂಲಕ ರೂಪಿಸಿರುವ ‘ಅಟಲ್ ಟಿಂಕರಿಂಗ್ ಲ್ಯಾಬ್’ ಯೋಜನೆ, ಜಿಲ್ಲೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಗಳಾಗಲು ಪ್ರೇರಣೆ ನೀಡುತ್ತಿವೆ.

ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆ 5 ವರ್ಷಗಳ ಕಾರ್ಯಕ್ರಮವಾಗಿದ್ದು,ಈ ಯೋಜನೆಯಡಿ ಪ್ರತಿ ಶಾಲೆಗೆ 20 ಲಕ್ಷ ರೂ. ಅನುದಾನವನ್ನು ಮಾನವ ಸಂಪನ್ಮೂಲ ಇಲಾಖೆಯು ನೀತಿ ಆಯೋಗದ ಮೂಲಕ ನೀಡುತ್ತಿದೆ. ಅದರಲ್ಲಿ 10 ಲಕ್ಷ ರೂ. ಅನುದಾನದಿಂದ ಪ್ರಯೋಗಾಲಯಕ್ಕೆ ಬೇಕಾದ ಅಗತ್ಯ ಉಪಕರಣಗಳು, ಲ್ಯಾಬ್ ಸ್ಥಾಪನೆ, ಲ್ಯಾಬ್ ಕೊಠಡಿ ತಯಾರಿ ಮಾಡಿ ಕೊಳ್ಳಲು ಬಳಸಲಾಗುತ್ತದೆ. ಅಲ್ಲದೇ ಪ್ರತಿ ವರ್ಷ ಲ್ಯಾಬ್ ನಿರ್ವಹಣೆಗಾಗಿ ಎರಡು ಲಕ್ಷ ರೂ. ಅನುದಾನ ಮಂಜೂರಾಗುತ್ತದೆ. ಹೀಗೆ ಪ್ರಾರಂಭದಲ್ಲಿ ಒಟ್ಟು 12ಲಕ್ಷ ರೂ. ಬಳಿಕ ಪ್ರತಿ ವರ್ಷ ಎರಡು ಲಕ್ಷ ರೂ. ಅನುದಾನ ಬಿಡುಗಡೆಯಾಗುತ್ತದೆ.

ಈ ಲ್ಯಾಬ್‌ನಲ್ಲಿ ಎಲೆಕ್ಟ್ರಾನಿಕ್ಸ್, ರೋಬೋಟಿಕ್ಸ್, 3ಡಿ ಪ್ರಿಂಟರ್ಸ್‌ ಸೌಲಭ್ಯ ಗಳಿದ್ದು, ವಿಜ್ಞಾನ, ಗಣಿತ, ಭೌತ ಶಾಸ್ತ್ರದ ಸಮಸ್ಯೆ ಪರಿಹಾರಕ್ಕೆ ಕಾರ್ಯಾಗಾರ, ಪ್ರದರ್ಶನ,ಉಪನ್ಯಾಸ ನೀಡಲು ಪ್ರಯೋಗಾಲಯ ಪೂರಕವಾಗಿದೆ. ಪ್ರೊಜೆಕ್ಟರ್ ಸಹಿತ ಅಡಿಯೋ ವಿಜ್ಯುವಲ್ ಕೊಠಡಿ ಹಾಗೂ ಪ್ರಯೋಗಾಲಯ ಸಹ ಇರಲಿದೆ.

ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ವಿಷಯದ ಬಗ್ಗೆ ಕುತೂಹಲ ಕೆರಳಿಸಿ, ಪ್ರತಿಭೆಯ ಸೃಜನಶೀಲತೆ ಅರಳಿಸಿ, ಯುವಮನಸ್ಸುಗಳಲ್ಲಿ ಹೊಸ ಸಂಶೋಧನೆ ಚಿಂತನೆಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಾಣೆ ಹಿಡಿದಿದ್ದು, ಅವರಲ್ಲಿ ಮೂಡುವ ಹೊಸ ಆಲೋಚನೆಗಳಿಗೆ ಸ್ಪಷ್ಟ ರೂಪ, ವಿನ್ಯಾಸ ನೀಡಲು ಸಹಕಾರಿಯಾಗುತ್ತಿದೆ. ಈ ಲ್ಯಾಬ್‌ನಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಅಡಿಪಾಯ ಹಾಕಲು ‘ನೀವೇ ಮಾಡಿ ನೋಡಿ’ (ಡು ಇಟ್ ಯುವರ್‌ಸೆಲ್ಪ್) ಸಲಕರಣೆಗಳನ್ನು ಒದಗಿಸಲಾಗಿದೆ.

ಜಿಲ್ಲೆಯಲ್ಲಿ 2016-17ರಲ್ಲಿ ಒಂದು ಶಾಲೆ, 2017-18ರಲ್ಲಿ 23 ಶಾಲೆಗಳು, 18-19ರಲ್ಲಿ 5 ಶಾಲೆ, 2019-20ರಲ್ಲಿ 17 ಶಾಲೆಗಳು ಸೇರಿದಂತೆ ಒಟ್ಟು 46 ಶಾಲೆಗಳಿಗೆ ಅಟಲ್ ಟಿಂಕರಿಂಗ್ ಯೋಜನೆ ಮಂಜೂರಾಗಿದ್ದು, ಇದರಲ್ಲಿ ಒಟ್ಟು 26 ಸರಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು ಹಾಗೂ 07 ಅನುದಾನರಹಿತ ಶಾಲೆಗಳು. ಒಂದು ನವೋದಯ ವಿದ್ಯಾಲಯ, ಎರಡು ಕೇಂದ್ರಿಯ ವಿದ್ಯಾಲಯಗಳೂ ಇದರಲ್ಲಿ ಸೇರಿವೆ.

ಉಡುಪಿಯ ಒಳಕಾಡು ಪ್ರೌಢಶಾಲೆಯಲ್ಲಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು, ರೋಬೋಟಿಕ್ ಆರ್ಮ್, ಗ್ರಾಸ್‌ಕಟ್ಟರ್ (ಸೆನ್ಸಾರ್ ಅಳವಡಿಸಿದೆ), ರೋಬೋಟ್ (ರೆಡಿಮೇಡ್, ಕಂಟ್ರೋಲ್ಡ್ ಬೈ ಮೊಬೈಲ್), ಡ್ರೋಣ್, ರೋಬೋಟಿಕ್ ಕಾರ್ ಮುಂತಾದ ವೈವಿಧ್ಯಮಯ ಎಲೆಕ್ಟ್ರಾನಿಕ್ ಮಾದರಿಗಳನ್ನು ಹಾಗೂ 3 ಡಿ ಪ್ರಿಂಟರ್ ಮೂಲಕ ಪ್ಲಾಸ್ಟಿಕ್‌ನಿಂದ ಐನ್‌ಸ್ಟೀನ್ ಮುಂತಾದ ಪ್ರತಿಮೆಗಳನ್ನು ತಯಾರಿಸಿದ್ದು, ಇವು ಪರಿಸರಕ್ಕೆ ಹಾನಿಯಾಗದೇ ಮಣ್ಣಿನೊಂದಿಗೆ ಬರೆಯುವ ಗುಣ ಹೊಂದಿವೆ.

ಅಟಲ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರತ್ಯೇಕ ಶಿಕ್ಷಕರುಗಳಿಲ್ಲ. ಆಯಾ ಶಾಲೆಗಳಲ್ಲಿರುವ ವಿಜ್ಞಾನ ಶಿಕ್ಷಕರೇ ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಹೆಚ್ಚುವರಿಯಾಗಿ ಲ್ಯಾಬ್‌ನಲ್ಲಿ ತರಬೇತಿ ನೀಡುತ್ತಿದ್ದು, ಕನಿಷ್ಠ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಪಡೆದಿರುವ ಶಿಕ್ಷಕರನ್ನು ಗೌರವಧನದ ಆಧಾರದ ಮೇಲೆ ನೇಮಿಸಿದಲ್ಲಿ, ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಬಹುದಾಗಿದೆ. ಈ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೈಜ್ಞಾನಿಕ ಜ್ಞಾನ ಅಭಿವೃಧ್ದಿಗಾಗಿ ಇದುವರೆಗೆ 10ಕ್ಕೂ ಹೆಚ್ಚು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ವಳಕಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲ ತಿಳಿಸಿದರು.
ಅಟಲ್ ಲ್ಯಾಬ್ ಮೂಲಕ ಭಾರತದಲ್ಲಿ ಮುಂದಿನ ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರಿಯ ಮಟ್ಟದ ವಿಜ್ಞಾನಿಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ನೀಡಿ, ಅವರಿಂದ ಉತ್ತಮ ಆವಿಷ್ಕಾರಗಳನ್ನು ಮಾಡಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಮೂಲಕ ಭಾರತ, ವಿಶ್ವಕ್ಕೆ ಉತ್ತಮ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುವ ವಿಶ್ವಾಸವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News