ಅಸ್ಸಾಮಿನಲ್ಲಿ ಪೌರತ್ವ ಮಸೂದೆ ವಿರುದ್ಧ ತೀವ್ರ ಪ್ರತಿಭಟನೆ: ಭಾರತ-ಜಪಾನ್ ಶೃಂಗಸಭೆ ಮುಂದೂಡಿಕೆ

Update: 2019-12-19 06:07 GMT

ಹೊಸದಿಲ್ಲಿ,ಡಿ.13: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಅಸ್ಸಾಮಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ಸರಕಾರವು ಶುಕ್ರವಾರ ಪ್ರಕಟಿಸಿದೆ.

ಜಪಾನ ಪ್ರಧಾನಿ ಶಿಂಝೊ ಅಬೆ ಅವರ ಭಾರತ ಭೇಟಿಯನ್ನು ಮುಂದೂಡಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಶೀಘ್ರವೇ ಉಭಯರಿಗೆ ಅನುಕೂಲಕರವಾದ ದಿನಾಂಕದಂದು ಈ ಭೇಟಿ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದರು.

ಮುಂದಿನ 15 ದಿನಗಳಲ್ಲಿ ಉಭಯ ಪ್ರಧಾನಿಗಳ ಭೇಟಿ ಸಾಧ್ಯವಾಗದಿದ್ದರೆ ವಾರ್ಷಿಕವಾಗಿ ನಡೆಯುವ ಈ ದ್ವಿಪಕ್ಷೀಯ ಶೃಂಗಸಭೆಯಿಂದ 2019 ವಂಚಿತಗೊಳ್ಳಲಿದೆ.

ಮೋದಿ-ಅಬೆ ನಡುವಿನ ಶೃಂಗಸಭೆಯು ಡಿ.15-17ರಂದು ನಡೆಯಲಿದೆ ಎಂದು ಸರಕಾರವು ಈ ಮೊದಲು ಪ್ರಕಟಿಸಿತ್ತು. ಆದರೆ ಶೃಂಗಸಭೆಯು ನಡೆಯಲಿರುವ ಸ್ಥಳವನ್ನು ವಿಧ್ಯುಕ್ತವಾಗಿ ಘೋಷಿಸಿರಲಿಲ್ಲ.

ಭಾರತದ ‘ಆ್ಯಕ್ಟ್ ಈಸ್ಟ್ ’ ನೀತಿಯ ಭಾಗವಾಗಿ ಅನುಕೂಲಕರ ಸ್ಥಳದಲ್ಲಿರುವುದರಿಂದ ಮತ್ತು ಈಶಾನ್ಯ ಭಾರತದಲ್ಲಿ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಜಪಾನ್ ತೊಡಗಿಕೊಂಡಿರುವುದರಿಂದ ಅಸ್ಸಾಂ ರಾಜಧಾನಿ ಗುವಾಹಟಿಯನ್ನು ಶೃಂಗಸಭೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಬುಧವಾರ ಜಪಾನ್ ರಾಯಭಾರಿ ಕಚೇರಿ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ಗುವಾಹಟಿಗೆ ಭೇಟಿ ನೀಡಿ ನಿಗದಿತ ಸ್ಥಳಗಳನ್ನು ಪರಿಶೀಲಿಸಿದ್ದರು. ಆಗಲೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶೃಂಗಸಭೆಯು ನಿಗದಿಯಂತೆ ನಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿತ್ತು.

ಅಸ್ಸಾಮಿನಲ್ಲಿ ಕಳೆದ ಮೂರು ದಿನಗಳಿಂದಲೂ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶೃಂಗಸಭೆಯನ್ನು ಮುಂದೂಡಲು ಈಗ ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News