ಅಕ್ರಮ ನಗದು ವಹಿವಾಟುಗಳಲ್ಲಿ ಹೆಚ್ಚಳ: ಐಟಿ ಇಲಾಖೆ ಅಂಕಿಅಂಶದಿಂದ ಬಹಿರಂಗ

Update: 2019-12-13 17:59 GMT

ಹೊಸದಿಲ್ಲಿ, ಡಿ.13: ನರೇಂದ್ರ ಮೋದಿ ಸರಕಾರವು ಆದಾಯ ತೆರಿಗೆ ಕಾಯ್ದೆಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಿರುವ ಹೊರತಾಗಿಯೂ 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಅಕ್ರಮ ನಗದು ವಹಿವಾಟುಗಳು ಸ್ಥಿರವಾಗಿ ಏರಿಕೆಯಾಗುತ್ತಲೇ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 2,101 ಕೋಟಿ ರೂ. ಮೊತ್ತದ ನಗದು ವಹಿವಾಟನ್ನು ಒಳಗೊಂಡ 1421 ಪ್ರಕರಣಗಳನ್ನು ಪತ್ತೆಹಚ್ಚಿರುವುದಾಗಿ ಆದಾಯ ತೆರಿಗೆ ಇಲಾಖೆಯು ಲೋಕಸಭೆಗೆ ತಿಳಿಸಿದೆ. 2018-19ರ ಸಾಲಿನಲ್ಲಿ 1015 ಕೋಟಿ ರೂ. ನಗದು ಹಣವನ್ನು ಒಳಗೊಂಡ 1110 ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆ ಭೇದಿಸಿತ್ತು.

ಬ್ಯಾಂಕ್‌ಗಳು ಮೊದಲಾದ ವಿವಿಧ ಹಣಕಾಸು ಸಂಸ್ಥೆಗಳು ಒದಗಿಸಿದ ಹಣಕಾಸು ವಹಿವಾಟುಗಳ ವಿವರಣೆಗಳ ಮೂಲಕ ಲಭ್ಯವಾದ ಮಾಹಿತಿಯನ್ನು ಆಧರಿಸಿ ಈ ಅಕ್ರಮ ವಹಿವಾಟುಗಳನ್ನು ಪತ್ತೆಹಚ್ಚಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಹಾಲಿ ವರ್ಷದಲ್ಲಿ ಈ ತನಕ 6692 ಕೋಟಿ ರೂ. ವಹಿವಾಟುಗಳನ್ನು ಒಳಗೊಂಡ  6692 ಪ್ರಕರಣಗಳನ್ನು ತಾನು ಪತ್ತೆಹಚ್ಚಿರುವುದಾಗಿ ಆದಾಯ ತೆರಿಗೆ ಇಲಾಖೆ ಡಿ.10ರಂದು ರಾಜ್ಯಸಭೆಗೆ ತಿಳಿಸಿತ್ತು. 20 ಸಾವಿರ ರೂ.ಗೂ ಅಧಿಕ ಮೊತ್ತದ ಸಾಲ ಹಾಗೂ ಠೇವಣಿ ಪಾವತಿಗಳನ್ನು ನಗದು ರೂಪದಲ್ಲೇ ಮಾಡಲಾಗಿದ್ದು, ಇದು ಆದಾಯತೆರಿಗೆ ಕಾಯ್ದೆಯ 269ಎಸ್‌ಎಸ್ ಸೆಕ್ಷನ್‌ನ ಉಲ್ಲಂಘನೆಯಾಗಿದೆಯೆಂದು ಅದು ಹೇಳಿದೆ.

2018-19ನೇ ಸಾಲಿನಲ್ಲಿ ಒಟ್ಟು 8102 ಕೋಟಿ ರೂ. ಹಣವನ್ನು ಒಳಗೊಂಡ 40,039 ಪ್ರಕರಣಗಳಲ್ಲಿ ಆದಾಯ ತೆರಿಗೆ ಕಾಯ್ದೆಯ ನಿಯಮಾವಳಿಗಳ ಉಲ್ಲಂಘನೆಗಳು ನಡೆದಿವೆ.

ಕಪ್ಪು ಹಣವನ್ನು ಒಳಗೊಂಡ ಬಹುತೇಕ ನಗದು ವಹಿವಾಟುಗಳು ಈಗಲೂ ಪತ್ತೆಯಾಗದೆ ಉಳಿದಿವೆ. ಆದರೆ ಬ್ಯಾಂಕುಗಳು ನೀಡಿರುವ ದತ್ತಾಂಶಗಳ ಮೂಲಕ ಇಂತಹ ವಹಿವಾಟುಗಳನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆಗೆ ಸಾಧ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News