ಹದಿ ಹರೆಯದ ಹುಡುಗಿ ಕೋಪ ನಿಭಾಯಿಸುವುದನ್ನು ಕಲಿಯುತ್ತಿದ್ದಾಳೆ...

Update: 2019-12-13 16:36 GMT

ವಾಶಿಂಗ್ಟನ್, ಡಿ. 13: ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ‘ಆರಾಮವಾಗಿ ಕಾಲ ಕಳೆಯಬೇಕು, ಗೆಳೆಯರ ಜೊತೆಗೆ ಸಿನೆಮಾ ನೋಡಲು ಹೋಗಬೇಕು’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಲಹೆಗೆ ಗ್ರೆಟಾ ಅಷ್ಟೇ ವಿಧೇಯತೆಯಿಂದ ಪ್ರತಿಕ್ರಿಯಿಸಿದ್ದಾರೆ.

ಗ್ರೆಟಾ ತನ್‌ಬರ್ಗ್‌ರನ್ನು ‘ಟೈಮ್’ ಮ್ಯಾಗಝಿನ್ ‘ವರ್ಷದ ವ್ಯಕ್ತಿ’ ಎಂಬುದಾಗಿ ಘೋಷಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಟ್ರಂಪ್, ಇದು ಗ್ರೆಟಾ ತನ್‌ಬರ್ಗ್ ‘ಸ್ವಚ್ಛಂದವಾಗಿ ಕಾಲ ಕಳೆಯುವ ಹಾಗೂ ಗೆಳೆಯರ ಜೊತೆಗೆ ಸಿನೆಮಾಗೆ ಹೋಗುವ ಸಮಯ’ ಎಂದು ಹೇಳಿದ್ದರು.

‘‘ಇದು ಅತ್ಯಂತ ಹಾಸ್ಯಾಸ್ಪದ. ಗ್ರೆಟಾ ತನ್ನ ಮುಂಗೋಪವನ್ನು ನಿಭಾಯಿಸುವುದನ್ನು ಕಲಿಯಬೇಕು. ಬಳಿಕ ಗೆಳೆಯರ ಜೊತೆಗೆ ಉತ್ತಮ ಹಳೆಯ ಸಿನೆಮಾವೊಂದನ್ನು ನೋಡಲು ಹೋಗಬೇಕು! ಆರಾಮದಿಂದಿರು ಗ್ರೆಟಾ! ಆರಾಮದಿಂದಿರು!’’ ಎಂದು 73 ವರ್ಷದ ಟ್ರಂಪ್ ಟ್ವೀಟ್ ಮಾಡಿದ್ದರು.

‘ಭವಿಷ್ಯಕ್ಕಾಗಿ ಶುಕ್ರವಾರಗಳು’ ಎಂಬ ಪರಿಸರ ಸಂಬಂಧಿ ಪ್ರತಿಭಟನೆಗಳಿಂದ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ಬಂದ ಸ್ವೀಡನ್‌ನ 16 ವರ್ಷದ ಗ್ರೆಟಾ, ಟ್ರಂಪ್ ಟ್ವೀಟ್‌ಗೆ ತಕ್ಷಣ ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ.

‘‘ಹದಿ ಹರಯದ ಹುಡುಗಿಯೊಬ್ಬಳು ಕೋಪವನ್ನು ನಿಭಾಯಿಸುವುದನ್ನು ಕಲಿಯುತ್ತಿದ್ದಾಳೆ. ಈಗ ಅವಳು ಸ್ವಚ್ಛಂದವಾಗಿದ್ದಾಳೆ ಮತ್ತು ಸ್ನೇಹಿತನೊಂದಿಗೆ ಒಳ್ಳೆಯ ಹಳೆಯ ಮಾದರಿಯ ಚಿತ್ರವೊಂದನ್ನು ನೋಡುತ್ತಿದ್ದಾಳೆ’’ ಎಂದು ಗ್ರೆಟಾ ತನ್ನ ಟ್ವಿಟರ್ ವಿವರದಲ್ಲಿ ಬರೆದಿದ್ದಾರೆ.

ಜಾಗತಿಕ ನಾಯಕರ ವ್ಯಂಗ್ಯವನ್ನು ನಿಭಾಯಿಸಲು ಕಲಿತಿರುವ ತರುಣಿ!

ಸ್ನೇಹಪರರಲ್ಲದ ಜಾಗತಿಕ ನಾಯಕರ ವ್ಯಂಗ್ಯದ ಮಾತುಗಳನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನು ಗ್ರೆಟಾ ಅನುಭವದಿಂದ ಕಲಿಯುತ್ತಿದ್ದಾರೆ.

ಸೆಪ್ಟಂಬರ್‌ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಗ್ರೆಟಾರನ್ನು ‘‘ಕರುಣಾಳು, ಆದರೆ ಆಧುನಿಕ ಜಗತ್ತು ಸಂಕೀರ್ಣವಾಗಿದೆ ಎನ್ನುವುದನ್ನು ಆಕೆಗೆ ಯಾರೂ ವಿವರಿಸಿಲ್ಲ’’ ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ತನ್‌ಬರ್ಗ್, ತನ್ನ ಟ್ವಿಟರ್ ವಿವರವನ್ನು ‘‘ಓರ್ವ ಕರುಣಾಳು ಆದರೆ ಮಾಹಿತಿಯ ಕೊರತೆಯಿರುವ ಬಾಲಕಿ’’ ಎಂಬುದಾಗಿ ಬದಲಾಯಿಸಿದ್ದರು.

 ಇತ್ತೀಚೆಗೆ ಬ್ರೆಝಿಲ್ ಅಧ್ಯಕ್ಷ ಝೈರ್ ಬೊಲ್ಸೊನಾರೊ, ಗ್ರೆಟಾ ತನ್‌ಬರ್ಗ್‌ರನ್ನು ‘ಪಿರಾಳ’ (ಕೆಟ್ಟು ಹೋದ ಹುಡುಗಿ) ಎಂಬುದಾಗಿ ಬಣ್ಣಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಗ್ರೆಟಾ ತನ್ನ ಟ್ವಿಟರ್ ವಿವರದಲ್ಲಿ ‘ಪಿರಾಳ’ ಎಂಬುದಾಗಿ ಬರೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News