ಬ್ರಿಟನ್ ಪ್ರಧಾನಿ ಜಾನ್ಸನ್ ಪಕ್ಷಕ್ಕೆ ಭರ್ಜರಿ ಬಹುಮತ: ಇನ್ನು ಬ್ರೆಕ್ಸಿಟ್ ಸರಾಗ

Update: 2019-12-13 16:47 GMT

ಲಂಡನ್, ಡಿ. 13: ಬ್ರಿಟನ್‌ನಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್‌ರ ಕನ್ಸರ್ವೇಟಿವ್ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಫಲಿತಾಂಶವು ಜಾನ್ಸನ್‌ರ ಮಹತ್ವಾಕಾಂಕ್ಷೆಯ ಬ್ರೆಕ್ಸಿಟ್‌ಗೆ ವೇಗವನ್ನು ಒದಗಿಸಿದೆ.

ಪ್ರತಿಪಕ್ಷ ಲೇಬರ್ ಪಾರ್ಟಿಯು ಬ್ರಿಟನ್‌ನ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಹೊರತಾಗಿಯೂ, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಆ ಪ್ರದೇಶಗಳಿಂದ ಹಲವು ಸ್ಥಾನಗಳನ್ನು ಕಸಿದುಕೊಂಡಿದೆ.

ಹೌಸ್ ಆಫ್ ಕಾಮನ್ಸ್‌ನ 650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು 364 ಸ್ಥಾನಗಳನ್ನು ಗೆದ್ದಿದೆ. ಇನ್ನು ಕೇವಲ ಒಂದು ಸ್ಥಾನದ ಫಲಿತಾಂಶ ಘೋಷಣೆಗೆ ಬಾಕಿಯಿದೆ. ಸದನದಲ್ಲಿ ಬಹುಮತಕ್ಕೆ ಬೇಕಾದ ಸ್ಥಾನಗಳ ಸಂಖ್ಯೆ 326. ಇದು ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್‌ರ ದಿನಗಳ ಬಳಿಕ, ಕನ್ಸರ್ವೇಟಿವ್ ಪಕ್ಷವು ಗಳಿಸಿದ ಅತಿ ದೊಡ್ಡ ವಿಜಯವಾಗಿದೆ. ಅದೇ ವೇಳೆ, ಪ್ರತಿಪಕ್ಷ ಲೇಬರ್ ಪಾರ್ಟಿ ಮತ್ತು ಅದರ ನಾಯಕ ಜೆರೆಮಿ ಕಾರ್ಬಿನ್ ನಾಲ್ಕು ದಶಕಗಳಲ್ಲೇ ಅತ್ಯಂತ ಹೀನ ಸೋಲು ಅನುಭವಿಸಿದ್ದಾರೆ.

ಲೇಬರ್ ಪಾರ್ಟಿಯು 203 ಸ್ಥಾನಗಳನ್ನು ಗಳಿಸಿದೆ.

ಸ್ಕಾಟಿಶ್ ನ್ಯಾಶನಲ್ ಪಾರ್ಟಿಯು 48 ಸ್ಥಾನಗಳನ್ನು ಗಳಿಸಿದರೆ, ಲಿಬರಲ್ ಡೆಮಾಕ್ರಟ್ಸ್ 11 ಸ್ಥಾನಗಳನ್ನು ಪಡೆದಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನನ್ನು ನಿರ್ಣಾಯಕವಾಗಿ ಬೇರ್ಪಡಿಸುವುದಕ್ಕಾಗಿ ಬಲಿಷ್ಠ ಜನಾದೇಶ ಪಡೆಯಲು ಪ್ರಧಾನಿ ಬೊರಿಸ್ ಜಾನ್ಸನ್ ಮಧ್ಯಂತರ ಚುನಾವಣೆಗೆ ಮೊರೆ ಹೋಗಿದ್ದರು. ಈಗ ಅದು ಅವರಿಗೆ ಫಲ ನೀಡಿದೆ.

ಬ್ರೆಕ್ಸಿಟ್ ಖಂಡಿತ; ಆದರೆ, ಹೋದರೆ ಇಲ್ಲ: ಜಾನ್ಸನ್

ನಿಗದಿಯಾಗಿರುವಂತೆ ಜನವರಿ 31ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುತ್ತದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಶುಕ್ರವಾರ ಹೇಳಿದರು.

ಗುರುವಾರ ಹೌಸ್ ಆಫ್ ಕಾಮನ್ಸ್‌ಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಬ್ರೆಕ್ಸಿಟ್ ವಿಚಾರದಲ್ಲಿ ಮೂರು ವರ್ಷಗಳಿಗೂ ಅಧಿಕ ಕಾಲ ನಡೆದ ರಾಜಕೀಯ ಹಗ್ಗಜಗ್ಗಾಟವನ್ನು ಖಂಡಿಸಿದ ಅವರು, ‘‘ಈ ಎಲ್ಲ ಅಪಲಾಪಗಳಿಗೆ ನಾನು ಕೊನೆ ಹಾಡಲಿದ್ದೇನೆ. ನಾವು ಜನವರಿ 31ರಂದು ಸಮಯಕ್ಕೆ ಸರಿಯಾಗಿ ಬ್ರೆಕ್ಸಿಟ್ ಸಾಧಿಸಲಿದ್ದೇವೆ. ಇನ್ನು ಆದರೆ, ಹೋದರೆ ಏನೂ ಇಲ್ಲ’’ ಎಂದು ಹೇಳಿದರು.

ಭಾರತ ಮೂಲದ ಅಭ್ಯರ್ಥಿಗಳ ಉತ್ತಮ ಸಾಧನೆ

ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ಗೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಆಡಳಿತಾರೂಢ ಕನ್ಸರ್ವೇಟಿವ್ ಮತ್ತು ಪ್ರತಿಪಕ್ಷ ಲೇಬರ್- ಈ ಎರಡೂ ಪಕ್ಷಗಳ ಸುಮಾರು 12 ಭಾರತ ಮೂಲದ ಸಂಸದರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ ಹಾಗೂ ಹಲವು ಹೊಸ ಮುಖಗಳೂ ಆಯ್ಕೆಯಾಗಿವೆ.

ಹಿಂದಿನ ಸಂಸತ್ತಿನಲ್ಲಿದ್ದ ಎಲ್ಲ ಭಾರತ ಮೂಲದ ಸಂಸದರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಹಾಗೂ ಕನ್ಸರ್ವೇಟಿವ್ ಪಕ್ಷದಿಂದ ಗಗನ್ ಮಹೀಂದ್ರ ಮತ್ತು ಕ್ಲೇರ್ ಕುಟಿನೊ ಮತ್ತು ಲೇಬರ್ ಪಕ್ಷದಿಂದ ನವೇಂದ್ರು ಮಿಶ್ರ ಹೊಸದಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News