21 ದಿನಗಳೊಳಗೆ ಅತ್ಯಾಚಾರಿಗಳಿಗೆ ಮರಣದಂಡನೆ: ಮಹತ್ವದ ದಿಶಾ ಮಸೂದೆಗೆ ಆಂಧ್ರ ಅಸೆಂಬ್ಲಿ ಅಸ್ತು

Update: 2019-12-13 16:50 GMT

ಹೊಸದಿಲ್ಲಿ, ಡಿ.13: ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳಿಗೆ ಎಫ್‌ಐಆರ್ ದಾಖಲಾದ 21 ದಿನಗಳೊಳಗೆ ಮರಣದಂಡನೆ ವಿಧಿಸುವುದಕ್ಕೆ ಅವಕಾಶ ನೀಡುವ ದಿಶಾ ವಿಧೇಯಕ (ಅಂಧ್ರಪ್ರದೇಶ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ 2019)ವನ್ನು ಆಂಧ್ರಪ್ರದೇಶ ವಿಧಾನಸಭೆಯು ಶುಕ್ರವಾರ ಅಂಗೀಕರಿಸಿದೆ.

ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಆರೋಪಿಗಳಿಗೆ 21 ದಿನಗಳೊಳಗೆ ಮರಣದಂಡನೆ ವಿಧಿಸುವುದಕ್ಕೆ ದಿಶಾ ವಿಧೇಯಕವು ಅವಕಾಶ ನೀಡುತ್ತದೆ.

2019ರ ಸಾಲಿನ ಆಂಧ್ರಪ್ರದೇಶ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆಯು ಅಥವಾ ಆಂಧ್ರಪ್ರದೇಶ ದಿಶಾ ಕಾಯ್ದೆಯಡಿ ಹೀನಾಯ ಅಪರಾಧವಾದ ಅತ್ಯಾಚಾರ ಪ್ರಕರಣಗಳಲ್ಲಿ ಸಮರ್ಪಕವಾದ ನಿರ್ಣಾಯ ಪುರಾವೆಗಳು ಲಭ್ಯವಿದ್ದಲ್ಲಿ ಏಳು ಕೆಲಸದ ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನ್ಯಾಯಾಂಗ ತನಿಖೆಯು ಹದಿನಾಲ್ಕು ದಿನಗಳೊಳಗೆ ಮುಕ್ತಾಯಗೊಳ್ಳಬೇಕಿದ್ದು, ತೀರ್ಪು ನೀಡಿಕೆಯ ದಿನವನ್ನು 21 ಕೆಲಸದ ದಿನಗಳೊಳಗೆ ಪೂರ್ತಿಗೊಳಿಸಬೇಕಾಗುತ್ತದೆ.

ಇಂದು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿ ಮಾತನಾಡಿದ ಗೃಹ ಸಚಿವೆ ಮೆಕಥೋಟಿ ಸುಚರಿತಾ ಅವರು ದಿಶಾ ಕಾಯ್ದೆಯು ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ತನಿಖೆ, ವಿಚಾರಣೆ ಹಾಗೂ ಶಿಕ್ಷೆಯನ್ನು ಖಾತರಿಪಡಿಸಲಿದೆ ಎಂದು ಹೇಳಿದ್ದಾರೆ.

ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ನಿರ್ದಿಷ್ಟ ಅಪರಾಧಗಳ ತಡೆ ಕಾಯ್ದೆ 1919ರ ಅಡಿಯಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೂ ಆಂಧ್ರಸಂಪುಟ ಅನುಮೋದನೆ ನೀಡಿದೆ. ಈ ಕಾಯ್ದೆಗೆ ಅನುಗುಣವಾಗಿ ಪ್ರತಿಯೊಂದು ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾಗಲಿದ್ದು ಮಹಿಳೆಯರ ಹಾಗೂ ಮಕ್ಕಳ  ವಿರುದ್ಧದ ನಿರ್ದಿಷ್ಟ ಅಪರಾಧಗಳ ವಿಚಾರಣೆ ನಡೆಸಲಿವೆ.

ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆ್ಯಸಿಡ್ ದಾಳಿ,ಹಿಂಬಾಲಿಸುವಿಕೆ, ಲೈಂಗಿಕ ದೃಶ್ಯ ವೀಕ್ಷಣೆ,ಲೈಂಗಿಕ ಕಿರುಕುಳ ಹಾಗೂ ಪೊಕ್ಸೊ ಕಾಯ್ದೆಯಡಿ ಬರುವ ಪ್ರಕರಣಗಳ ವಿಚಾರಣೆ ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News