ಭುವನೇಶ್ವರ್ ಬದಲಿಗೆ ಶಾರ್ದೂಲ್ ಠಾಕೂರ್

Update: 2019-12-14 17:16 GMT

ಮುಂಬೈ, ಡಿ.13: ವೆಸ್ಟ್‌ಇಂಡೀಸ್ ವಿರುದ್ಧ ರವಿವಾರ ಚೆನ್ನೈನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬದಲಿಗೆ ಆಡಲು ಮುಂಬೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಸಜ್ಜಾಗಿದ್ದಾರೆ.

ಭುವನೇಶ್ವರ ವಿಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿ ಆರಂಭಕ್ಕೆ ಮೊದಲು ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡಿದ್ದರು. ಆದರೆ, ತಿರುವನಂತಪುರದಲ್ಲಿ ನಡೆದ 2ನೇ ಪಂದ್ಯದ ವೇಳೆ ಮತ್ತೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಮುಂಬೈನಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯಕ್ಕಿಂತ ಮೊದಲು ಭುವನೇಶ್ವರ್‌ಗೆ ಗಾಯದ ಸಮಸ್ಯೆ ಮರುಕಳಿಸಿತ್ತು.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಪುನಶ್ಚೇತನ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಉದ್ಭವಿಸಿತ್ತು. ನವದೀಪ್ ಸೈನಿ ಕೂಡ ಸಂಪೂರ್ಣ ಫಿಟ್ ಆಗಿಲ್ಲ. ಮುಂಬೈ ವೇಗಿ ಶಾರ್ದೂಲ್‌ರನ್ನು ಆಯ್ಕೆ ಮಾಡುವ ಮೊದಲು ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಗೆ ಉಮೇಶ್ ಯಾದವ್ ಹಾಗೂ ಶಾರ್ದೂಲ್‌ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಕಾಣಿಸಿಕೊಂಡಿತ್ತು. ಶಾರ್ದೂಲ್ ಶನಿವಾರ ನಡೆಯಲಿರುವ ಅಭ್ಯಾಸಕ್ಕೆ ಮೊದಲು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಶಾರ್ದೂಲ್ ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಬದಲಿ ಆಟಗಾರನಾಗಿ ಟೀಮ್ ಇಂಡಿಯಾ ಸೇರುತ್ತಿರುವ 2ನೇ ಆಟಗಾರ. ಕಳೆದ ವಾರ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಮಂಡಿನೋವಿನಿಂದ ಚೇತರಿಸಿಕೊಳ್ಳಲು ವಿಫಲವಾದ ಕಾರಣ ಮಾಯಾಂಕ್ ಅಗರ್ವಾಲ್‌ಗೆ ತಂಡ ಸೇರಲು ಹಾದಿ ಮಾಡಿಕೊಟ್ಟಿದ್ದರು. ಧವನ್‌ಗೆ ಕಳೆದ ತಿಂಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಗಾಯವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News