ದ್ವಿತೀಯ ಏಕದಿನಕ್ಕೆ ಮೊದಲು ನೆಟ್ ಪ್ರಾಕ್ಟೀಸ್ ನಡೆಸಲಿದ್ದಾರೆ ಬುಮ್ರಾ

Update: 2019-12-13 18:28 GMT

ಹೊಸದಿಲ್ಲಿ, ಡಿ.13: ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಪುನಶ್ಚೇತನ ಕಾರ್ಯಕ್ರಮದ ಭಾಗವಾಗಿ ವಿಶಾಖಪಟ್ಟಣದಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಮೊದಲು ನೆಟ್ ಪ್ರಾಕ್ಟೀಸ್ ನಡೆಸಲಿದ್ದಾರೆ.

 ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶದಲ್ಲಿ ನಡೆದ ಸರಣಿಯ ಬಳಿಕ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಗೆ ಮೊದಲು ಬುಮ್ರಾ ಗಾಯದಿಂದ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ. ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ಡಿ.18ಕ್ಕೆ ನಿಗದಿಯಾಗಿದೆ.

 ಬುಮ್ರಾ ಭಾರತೀಯ ತಂಡದೊಂದಿಗೆ ನೆಟ್ ಪ್ರಾಕ್ಟೀಸ್ ನಡೆಸಲಿದ್ದಾರೆ. ಇದೊಂದು ನಿಯಮವಾಗಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯಕ್ಕಿಂತ ಮೊದಲು ಟೀಮ್ ಮ್ಯಾನೇಜ್‌ಮೆಂಟ್ ಭುವನೇಶ್ವರ ಕುಮಾರ್ ಅವರ ಫಿಟ್ನೆಸ್ ಪರಿಶೀಲಿಸಿತ್ತು. ಇದು ಅದೇ ರೀತಿಯ ಹೆಜ್ಜೆಯಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭುವನೇಶ್ವರ ಶೇ.100ರಷ್ಟು ಫಿಟ್ ಇದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಮನವರಿಕೆಯಾದ ಬಳಿಕ ವಿಂಡೀಸ್ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಆಯ್ಕೆಯಾಗುತ್ತಾರೆ.

ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

26ರ ಹರೆಯದ ಬುಮ್ರಾ ಶ್ರೀಲಂಕಾ ವಿರುದ್ಧ ಮುಂದಿನ ಸರಣಿಗೆ ಲಭ್ಯವಿರುವ ಸಾಧ್ಯತೆಯಿಲ್ಲ. ನ್ಯೂಝಿಲ್ಯಾಂಡ್ ವಿಮಾನ ಏರುವ ಮೊದಲು ಕೆಲವು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಕೆಲವು ಪಂದ್ಯಗಳಲ್ಲಿ ಆಡಲು ಭಾರತ ಎ ತಂಡದೊಂದಿಗೆ ಬುಮ್ರಾ ನ್ಯೂಝಿಲ್ಯಾಂಡ್‌ಗೆ ತೆರಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News