ದೇಶವನ್ನಾಳುತ್ತಿರುವುದು ‘ತುಕ್‌ಡೇ ತುಕ್‌ಡೇ ಗ್ಯಾಂಗ್’: ಅಮರ್‌ಜಿತ್ ಕೌರ್

Update: 2019-12-19 06:45 GMT

ಮಂಗಳೂರು, ಡಿ.14: ಪೌರತ್ವ ಕಾಯ್ದೆ, ಎನ್‌ಆರ್‌ಸಿ ಮೂಲಕ ದೇಶ ವಿಭಜನೆಯ ಯತ್ನವನ್ನು ನಡೆಸುತ್ತಿರುವ ‘ತುಕ್‌ಡೇ ತುಕ್‌ಡೇ ಗ್ಯಾಂಗ್’ ದೇಶವನ್ನು ಆಳುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ಆರಂಭವಾದ ಈ ಗ್ಯಾಂಗ್‌ನ ಒಡೆದು ಆಳುವ ನೀತಿಯನ್ನು ಇದೀಗ ದೇಶದ ಚುಕ್ಕಾಣಿ ಹಿಡಿದು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 1925ರಲ್ಲಿ ಆರೆಸ್ಸೆಸ್ ಆರಂಭವಾದಾಗಿನಿಂದಲೂ ದೇಶವನ್ನು ಒಡೆಯುವ ರಾಜಕಾರಣ ಶುರುವಾಗಿತ್ತು. ಅದಕ್ಕಾಗಿ ಅವರಿಗೆ ಧಾರ್ಮಿಕ ದೇಣಿಗೆ ಅಂದೂ ಸಿಗುತ್ತಿತ್ತು, ಇಂದೂ ಸಿಗುತ್ತಿದೆ. ಅಂದು ಸಾವರ್ಕರ್ ಪ್ರತಿಪಾದಿಸಿದ ‘ಎರಡು ದೇಶ’ ಸಿದ್ಧಾಂತಕ್ಕೆ 13 ವರ್ಷಗಳ ಬಳಿಕ ಮಹಮ್ಮದ್ ಅಲಿ ಜಿನ್ನಾ ಕೈಜೋಡಿಸಿದ್ದರು. ಸ್ವಾತಂತ್ರಾನಂತರವೂ ಇದೇ ಗುಂಪಿನಿಂದ ದೇಶ ಒಡೆದಾಳುವ ರಾಜಕಾರಣ ಮುಂದುವರಿದಿದ್ದು, ಈಗ ಅದೇ ‘ತುಕ್‌ಡೇ ತುಕ್‌ಡೇ ಗ್ಯಾಂಗ್’ ಅಧಿಕಾರ ಪಡೆದಿದೆ ಎಂದು ಆರೋಪಿಸಿದರು.

ದೇಶದ ಅರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದನ್ನು ಸುಧಾರಿಸುವ ಬದಲು ಕೇಂದ್ರ ಸರಕಾರ ಎನ್‌ಆರ್‌ಸಿ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದ ಬಳಿಕ ಜಪಾನಿನ ನಿಯೋಗ ಭಾರತಕ್ಕೆ ಬರುವುದನ್ನು ನಿರಾಕರಿಸಿದೆ. ಇದು ತಾರತಮ್ಯದ ಕಾನೂನು ಎಂದು ಯುನೈಟೆಡ್ ಸ್ಟೇಟ್ಸ್ ವಿರೋಧಿಸಿದೆ. ದೇಶದ ಐಕ್ಯಕ್ಕೆ ಮಾರಕವಾಗಿರುವ ಸಂವಿಧಾನ ವಿರೋಧಿ ಮಸೂದೆ ಜಾರಿಯ ಮೂಲಕ ಈಗಾಗಲೇ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿರುವ ದೇಶದ ಜನತೆ ಇನ್ನಷ್ಟು ಕಷ್ಟಗಳಿಗೆ ಈಡಾಗಲಿದ್ದಾರೆ. ದೇಶದ ಜನರನ್ನು ಒಡೆಯುವ ಈ ಮಸೂದೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಅಮರ್‌ಜೀತ್ ಕೌರ್ ಆಗ್ರಹಿಸಿದರು.

 ದೇಶದ ಕಾರ್ಮಿಕರ ಒಗ್ಗಟ್ಟು ಮುರಿದು ಉದ್ದಿಮೆದಾರರ ಹಿತ ಕಾಪಾಡುವುದಕ್ಕಾಗಿ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಿಸುತ್ತಿದೆ. ತಪ್ಪು ಆರ್ಥಿಕ ನೀತಿಗಳು, ಕಾರ್ಮಿಕ ವಿರೋಧಿ ಕಾನೂನುಗಳಿಂದಾಗಿ ದೇಶದ ಒಟ್ಟು 56 ಕೋಟಿ ಕಾರ್ಮಿಕರಲ್ಲಿ ಶೇ.90ರಷ್ಟು ಮಂದಿ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದ ಅಮರ್‌ಜೀತ್ ಕೌರ್, ಕಾರ್ಮಿಕ ಕಾನೂನು ತಿದ್ದುಪಡಿಗೆ ನಾವು ವಿರೋಧಿಯಲ್ಲ. ಅದು ಕಾರ್ಮಿಕ ಸ್ನೇಹಿಯಾಗಿರಬೇಕು. ಆದರೆ ಕಾರ್ಮಿಕರ ಅನ್ನಕ್ಕೆ ಕಲ್ಲು ಹಾಕುವ ಕಾನೂನನ್ನು ಕೇಂದ್ರ ಜಾರಿಗೊಳಿಸುತ್ತಿದೆ ಎಂದು ಪ್ರತಿಕ್ರಿಯಿಸಿದರು.

 ಸುದ್ದಿಗೋಷ್ಠಿಯಲ್ಲಿ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಐ ದ.ಕ., ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್ ಉಪಸ್ಥಿತರಿದ್ದರು.


ನೋಟು ಅಮಾನ್ಯೀಕರಣದಿಂದ ದೇಶದ 10 ಲಕ್ಷದಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರ ಪಡೆದುಕೊಂಡ ಮೋದಿ ಸರಕಾರ ಕಳೆದ ಐದು ವರ್ಷಗಳ ಆಡಳಿತದ ಅವಧಿಯಲ್ಲಿ 5 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜಿಎಸ್‌ಟಿ ಜಾರಿಗೊಳಿಸಿದ್ದರಿಂದ ವಾಹನೋದ್ಯಮದಲ್ಲಿ ಶೇ.35ರಷ್ಟು ಉತ್ಪಾದನೆ ಇಳಿದಿದೆ. ಟೆಕ್ಸ್‌ಟೈಲ್, ಐಟಿ ಕ್ಷೇತ್ರಗಳೂ ಆರ್ಥಿಕ ದುಃಸ್ಥಿತಿಗೆ ತಲುಪಿವೆ. ದೇಶದ ಕೈಗಾರಿಕಾ ಹಬ್‌ಗಳು ಅತಂತ್ರಗೊಂಡಿವೆ. ಸಾರ್ವಜನಿಕ ವಲಯದ ವಿಮಾನ ನಿಲ್ದಾಣಗಳನ್ನು ಅದಾನಿ ಕಂಪೆನಿಗೆ ಹಸ್ತಾಂತರಿಸಲಾಗಿದೆ. ಬಿಪಿಸಿಎಲ್ ಸೇರಿದಂತೆ ಅನೇಕ ಸರ್ಕಾರಿ ಉದ್ದಿಮೆಗಳ ಖಾಸಗಿಕರಣಕ್ಕೆ ಮುಂದಾಗಿದ್ದಾರೆ. ಖಾಸಗಿ ಟೆಲಿಕಾಂ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ ಬಿಎಸ್ಸೆನ್ನೆಲ್- ಎಂಟಿಎನ್‌ಎಲ್ ವಿಲೀನಗೊಳಿಸಿ ಈಗಾಗಲೇ 79 ಸಾವಿರ ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಎಲ್ಲ ದೇಶ ವಿರೋಧಿ ಚಟುವಟಿಕೆಗಳಿಂದ ಜನರ ಗಮನವನ್ನು ಬೇರೆಡೆಗೆ ಕಳುಹಿಸಲು ಪೌರತ್ವ ತಿದ್ದುಪಡಿ ಮಸೂದೆ, 370ನೇ ವಿಧಿ ರದ್ದತಿ, ಅಯೋಧ್ಯೆ ವಿಚಾರಗಳನ್ನು ಪ್ರಸ್ತಾಪಿಸಿ ಭಾವನಾತ್ಮಕವಾಗಿ ಜನರನ್ನು ಆರ್ಥಿಕ ಹಿಂಜರಿತದ ವಿಷಯದಿಂದ ಬೇರೆಡೆಗೆ ಸೆಳೆಯುವ ಯತ್ನ ನಡೆಸುತ್ತಿದೆ. ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಹತ್ತಿಕ್ಕಲಾಗುತ್ತಿದೆೆ ಎಐಟಿಯುಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News