ಜ.8ರಂದು ಕಾರ್ಮಿಕ ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಮುಷ್ಕರ: ಅಮರ್‌ಜಿತ್ ಕೌರ್

Update: 2019-12-14 08:01 GMT

ಮಂಗಳೂರು, ಜ.14: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ರಾಷ್ಟ್ರವಿರೋಧಿ ಧೋರಣೆಗಳನ್ನು ಪ್ರತಿಭಟಿಸಿ ಜನವರಿ 8ರಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಬೃಹತ್ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ( ಎಐಯುಟಿಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕೌರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸೆ.30ರಂದು ಹೊಸದಿಲ್ಲಿಯಲ್ಲಿ ನಡೆದ ವಿವಿಧ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಸಮಾವೇಶದಲ್ಲಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಹಾಗೂ ರಾಷ್ಟ್ರವಿರೋಧಿ ನೀತಿಯನ್ನು ಪ್ರತಿಭಟಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಇದರಲ್ಲಿ 25 ಕೋಟಿ ಜನತೆ ಭಾಗವಹಿಸಲಿದ್ದಾರೆ. ಎಐಟಿಯುಸಿ, ಸಿಐಟಿಯು, ಎಐಸಿಸಿಟಿಯು, ಟಿಯುಸಿಸಿ, ಯುಟಿಯುಸಿ ಮಾತ್ರವಲ್ಲ, ಬ್ಯಾಂಕ್, ಇನ್ಸೂರೆನ್ಸ್ ಮತ್ತಿತರ ಕ್ಷೇತ್ರಗಳ ಸಂಘಟನೆಗಳು ಕೂಡ ಭಾಗವಹಿಸಲಿವೆ ಎಂದರು.

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಾರ್ಮಿಕರು ಇಂದು ಬೀದಿಪಾಲಾಗುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಸುಮಾರು 44 ಕಾರ್ಮಿಕ ಕಾನೂನುಗಳನ್ನು ಒಟ್ಟು ಸೇರಿಸಿ 4 ಕಾನೂನುಗಳಾಗಿ ಮಾಡಿ ಕಾರ್ಮಿಕರ ಸೌಲಭ್ಯಗಳನ್ನು ಕಸಿದುಕೊಂಡಿದೆ. ಕಾರ್ಮಿಕರ ವೇತನ ನಿಗದಿ, ಸುರಕ್ಷತೆ, ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಾಗಿದೆ. ಬಡವರ, ಕಾರ್ಮಿಕರ ಜೀವನ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವ ಬದಲು ದೊಡ್ಡ ಉದ್ದಿಮೆಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವುಗಳ ತೆರಿಗೆ ಕಡಿತ ಮಾಡಲಾಗುತ್ತಿದೆ. ಆದರೆ ಬಡವರ ಮೇಲೆ ಪರೋಕ್ಷ ತೆರಿಗೆ ಹಾಗೂ ಸುಂಕಗಳನ್ನು ಜಾಸ್ತಿ ಮಾಡಿ ಅವರ ಬದುಕನ್ನು ಇನ್ನಷ್ಟು ದುಸ್ತರಗೊಳಿಸಲಾಗಿದೆ ಎಂದವರು ಹೇಳಿದರು. ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿ ನಡೆಯುತ್ತಿದ್ದರೂ ಅವುಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ದೇಶದ ಅರ್ಥಿಕತೆ ಹಾಗೂ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಪ್ರಹಾರ ನೀಡಲಾಗುತ್ತಿದೆ. ಖಾಸಗಿ ಟೆಲಿಕಾಂ ವಲಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್- ಎಂಟಿಎನ್‌ಎಲ್ ವಿಲೀನ ಘೋಷಣೆಯ ಮೂಲಕ 79,000ಕ್ಕೂ ಅಧಿಕ ಉದ್ಯೋಗಿಗಳನ್ನು ವಿಆರ್‌ಎಸ್ ನೆಪದಲ್ಲಿ ಬಲವಂತವಾಗಿ ನಿವೃತ್ತಿಗೊಳಿಸಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ವಾಣಿಜ್ಜೀಕರಣಗೊಳಿಸಿ ಬಡವರು, ಮಧ್ಯಮ ವರ್ಗದ ಮೇಲೆ ಬಹುದೊಡ್ಡ ಹೊಡೆತ ನೀಡಿದೆ ಎಂದವರು ಹೇಳಿದರು.

ಚಿಂತಕ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಐ ದ.ಕ., ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News