'ಬ್ಯಾರೀಸ್ ಕ್ವೆಂಚ್-19' ಕ್ವಿಝ್ ಸ್ಪರ್ಧೆಯ ಗ್ರಾಂಡ್ ಫಿನಾಲೆ: ಮಂಗಳೂರಿನ ಚೈತನ್ಯ ಕಾಲೇಜು ಪ್ರಥಮ

Update: 2019-12-14 16:31 GMT

ಕೊಣಾಜೆ: ಉಡುಪಿ, ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಇನೋಳಿಯ ಬ್ಯಾರೀಸ್ ಕಾಲೇಜಿನಲ್ಲಿ ನಡೆದ ಸೈನ್ಸ್ ಕ್ವಿಝ್ ಕಾಂಪಿಟೇಷನ್ 'ಬ್ಯಾರೀಸ್ ಕ್ವೆಂಚ್-19 ಗ್ರಾಂಡ್ ಫಿನಾಲೆ'ಯಲ್ಲಿ ಮಂಗಳೂರಿನ ಚೈತನ್ಯ ಪದವಿಪೂರ್ವ ಕಾಲೇಜು ಪ್ರಥಮ, ಕುಂದಾಪುರದ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಹಾಗೂ ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು ತೃತೀಯ ಪ್ರಶಸ್ತಿ ಪಡೆದುಕೊಂಡಿತು.

ಇನೋಳಿಯ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಟರ್ ನ್ಯಾಷನಲ್ ಸೆಮಿನಾರ್ ಹಾಲ್ ನಲ್ಲಿ‌ ಶನಿವಾರ ನಡೆದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರು,
ನಾವು ಮನಸ್ಸನ್ನು ಪರಿಶುದ್ದವಾಗಿಟ್ಟು ಹೃದಯವಂತರಾದರೆ ಯಾವುದೇ ಸವಾಲನ್ನೂ ಎದುರಿಸಲು ಸಾಧ್ಯವಾಗುತ್ತದೆ. ಹಾಗೆಯೇ ಸೋಲನ್ನು‌ ಸವಾಲಾಗಿ ಸ್ವೀಕರಿಸಿ ಗೆಲುವು ಪಡೆಯುವುದು ನಿಜಕ್ಕೂ ಸಾಧನೆ ಎಂದು ಹೇಳಿದರು.‌
ನಮ್ಮ ಬದುಕಿನಲ್ಲಿ ಸಂಪತ್ತು ಗಳಿಸುವುದಕ್ಕೂ ಒಂದು ಮಿತಿ‌ ಇದೆ. ಆದರೆ ಜ್ಞಾನ ಸಂಪಾದನೆಗೆ ಮಿತಿ ಇಲ್ಲ. ಹಣವನ್ನು ಹಂಚಿದರೆ ಮತ್ತೆ ನಮ್ಮಲ್ಲಿ ಉಳಿಯುವುದಕ್ಕೂ ಮಿತಿ ಇದೆ. ಆದರೆ ಜ್ಞಾನ‌ ಹಂಚಿದರೆ ಇನ್ನಷ್ಟು ಜ್ಞಾನ ನಮ್ಮದಾಗುವುದು ಎಂದರು.

ಮಾದಕದ್ರವ್ಯ ನಮ್ಮ ಭವಿಷ್ಯವನ್ನು ನಾಶಗೊಳಿಸುತ್ತದೆ. ನಾವು ಎಷ್ಟೇ ಶ್ರೀಮಂತರಾಗಿದ್ದರೂ ಆರೋಗ್ಯ ಇಲ್ಲದಿದ್ದರೆ ಯಾವುದೂ ಇಲ್ಲ. ಆದ್ದರಿಂದ ನಾವು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತವರಾಗಬೇಕು ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕಿ ಫಿಲೋಮಿನಾ ಲೋಬೊ ಅವರು ಮಾತನಾಡಿ, ಪ್ರತಿಯೊಂದು ಮಗುವೂ ವಿಜ್ಞಾನಿಯಾಗಿರುತ್ತದೆ. ಹಾಗೆಯೇ‌ ಸಮಾಜದಲ್ಲಿ ಪ್ರತಿಯೊಬ್ಬರೂ ವಿಜ್ಞಾನಿಯಾಗಿರುತ್ತಾನೆ. ಎಲ್ಲರಲ್ಲೂ ಶೋಧಿಸುವ ಮನೋಭಾವನೆ ಇದ್ದೇ ಇರುತ್ತದೆ. ನಾವು ಪ್ರಾಮಾಣಿಕರಾಗಿದ್ದುಕೊಂಡು ಜೀವನದಲ್ಲಿ ಏಕತೆಯೊಂದಿಗೆ ಮುನ್ನಡೆದು ಸಾಧನೆ ಮಾಡಿದರೆ ಯಶಸ್ಸು ಖಂಡಿತಾ ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೂಡುಬಿದಿರೆಯ ರೋಟರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವಿನ್ಸೆಂಟ್ ಡಿಕೋಸ್ಟ, ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಪ್ರಿನ್ಸಿಪಾಲ್ ಅಶೋಕ್ ಮೆಂಡೋನ್ಸಾ ಹಾಗೂ ಬ್ಯಾರೀಸ್ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕ ಡಾ. ಅಜೀಝ್ ಮುಸ್ತಫಾ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ 52ಪದವಿಪೂರ್ವ ಕಾಲೇಜುಗಳ 4500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ವಿಝ್ ಸ್ಪರ್ದೆಯಲ್ಲಿ ಬ್ಯಾರೀಸ್ ಕಾಲೇಜ್ ಆಫ್ ಟೆಕ್ನಾಲಜಿಯ ಪ್ರಿನ್ಸಿಪಾಲ್ ಎಸ್.ಜೆ. ಮಂಜೂರ್ ಭಾಷಾ ಸ್ವಾಗತಿಸಿದರು.‌

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಮತಾ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಪುಲ್ಲಾ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಅಂಕಿತಾ ಬೇಕಲ್ ಕಾರ್ಯಕ್ರಮ‌ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News