ಮಂಗಳೂರು: ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳಿಂದ ಆಂದೋಲನ

Update: 2019-12-14 13:38 GMT

ಮಂಗಳೂರು,ಡಿ.14: ಅವಿಭಜಿತ ದ.ಕ.ಜಿಲ್ಲೆಯ ಹದಿಹರೆಯದ ಅದರಲ್ಲೂ ಮುಸ್ಲಿಂ ಯುವಕರು ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿ ಕುಟುಂಬಕ್ಕೂ, ಸಮಾಜಕ್ಕೂ, ಸಮುದಾಯಕ್ಕೂ ಕಂಠಕವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಅವರನ್ನು ಆ ದಾಸ್ಯದಿಂದ ಮುಕ್ತಗೊಳಿಸುವ ಸಲುವಾಗಿ ಸಮುದಾಯದ ಸಮಾನ ಮನಸ್ಕರು ಸೇರಿಕೊಂಡು ‘ವ್ಯಸನಮುಕ್ತ ಸಮಾಜ’ಕ್ಕಾಗಿ ಮಸೀದಿ -ಜಮಾಅತ್‌ಗಳಲ್ಲಿ ಆಂದೋಲನ ಪ್ರಾರಂಭಿಸಿದ್ದೇವೆ ಎಂದು ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.

ನಗರದ ‘ಬ್ಯಾರೀಸ್ ವೆಲೆನ್ಸಿಯಾ’ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದ.ಕ.ಜಿಲ್ಲೆಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳಿವೆ. ಬಹುತೇಕ ಸಂಸ್ಥೆಗಳ ಆಸುಪಾಸುಗಳನ್ನು ಕೇಂದ್ರೀಕರಿಸಿಕೊಂಡು ಮಾದಕ ದ್ರವ್ಯ ಜಾಲದ ಸದಸ್ಯರು ವಿದ್ಯಾರ್ಥಿ-ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಮಾದಕ ಪದಾರ್ಥಗಳನ್ನು ಬಳಸಲು ಆರಂಭಿಸಿದರೆ ಅದರಿಂದ ಆತನ ಶರೀರ ಮತ್ತು ಮನಸ್ಸು ನಾಶವಾಗುವುದಲ್ಲದೆ ಆತನ ಭವಿಷ್ಯ, ಕುಟುಂಬ ಸಂಬಂಧಗಳು, ಪರಿಸರ ಎಲ್ಲವೂ ಹಾಳಾಗುತ್ತದೆ. ಇದು ಸಮಾಜದ, ಸಮುದಾಯದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ಎದುರಾಗುವ ಆಪತ್ತನ್ನು ತಡೆಯಲು ಇಂದೇ ಈ ಬಗ್ಗೆ ಜಾಗೃತಿ ಸೃಷ್ಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್-ಬೇಕಲ ಇಬ್ರಾಹೀಂ ಮುಸ್ಲಿಯಾರ್‌ರ ಮಾರ್ಗದರ್ಶನ ಪಡೆದು ಮಸೀದಿ-ಜಮಾಅತ್ ಮಟ್ಟದಲ್ಲಿ ಜಾಗೃತಿ-ಅಭಿಯಾನ ನಡೆಸಲಾಗುವುದು ಎಂದರು.

ಮಾದಕ ವ್ಯಸನವು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಎಲ್ಲಾ ಭಾಷೆ, ಜಾತಿ, ಧರ್ಮದ ಯುವಕರೂ ಇದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಮಸೀದಿ-ಜಮಾಅತ್‌ನ್ನು ಕೇಂದ್ರೀಕರಿಸಿದ್ದೇವೆ. ಉಭಯ ಜಿಲ್ಲೆಗಳ ಸಾವಿರಕ್ಕೂ ಅಧಿಕ ಮಸೀದಿಗಳ ಖತೀಬರು, ಅಧ್ಯಕ್ಷರ ಸಹಿತ ಆಡಳಿತ ಕಮಿಟಿಯ ಸಹಕಾರ ಪಡೆದು, ಆಪ್ತ ಸಮಾಲೋಚನೆ ನಡೆಸಿ ಅವರನ್ನು ಮಾದಕ ವ್ಯಸನದಿಂದ ದೂರ ಸರಿಸಲು ಶ್ರಮಿಸಲಾಗುವುದು. ಮಂಗಳೂರು ಬಿಷಪ್, ಪೇಜಾವರ ಸ್ವಾಮೀಜಿ ಸಹಿತ ಎರಡೂ ಜಿಲ್ಲೆಗಳ ಪ್ರಮುಖ ನಾಯಕರ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಸಹಿತ ವಿವಿಧ ಸ್ತರದ ಜನಪ್ರತಿನಿಧಿಗಳು, ಸಮಾಜದ-ಸಮುದಾಯದ ನಾಯಕರು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ವ್ಯಸನ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸೇವಾ ಸಂಸ್ಥೆಗಳು, ಸಲಹೆಗಾರರು, ತಜ್ಞ ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಯುವಜನರ ಹಾಗು ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಹಕಾರವನ್ನು ಪಡೆಯಲಾಗುವುದು. ಇದು ಇಂದು ಆರಂಭಿಸಿ ನಾಳೆ ಕೊನೆಗೊಳಿಸುವಂತದ್ದಲ್ಲ. ನಿರಂತರವಾಗಿ ನಡೆಸುವ ಪ್ರಕ್ರಿಯೆ ಇದಾಗಿದೆ. ಆರಂಭದಲ್ಲಿ ನೂರು ದಿನಗಳ ಗುರಿಯೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ನೂರು ದಿನಗಳ ಜಾಗೃತಿಯ ಫಲಿತಾಂಶ ಆಧರಿಸಿ ಮುಂದಿನ ಯೋಜನೆಯ ಬಗ್ಗೆ ರೂಪುರೇಷ ಹಮ್ಮಿಕೊಳ್ಳಲಾಗುವುದು ಎಂದು ಸೈಯದ್ ಮುಹಮ್ಮದ್ ಬ್ಯಾರಿ ನುಡಿದರು.

ಇಂದು ಜಗತ್ತಿನ ಮೂರು ಅತಿದೊಡ್ಡ ಉದ್ಯಮಗಳ ಪೈಕಿ ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರಗಳ ಉದ್ಯಮಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿದ್ದರೆ ಮಾದಕ ದ್ರವ್ಯಗಳ ಉದ್ಯಮವು ಮೂರನೆಯ ಸ್ಥಾನದಲ್ಲಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮಾದಕ ವ್ಯಸನ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದು ಕಳವಳದ ವಿಚಾರವಾಗಿದೆ. ಮಾಧ್ಯಮಗಳ ವರದಿಗಳು, ಶಿಕ್ಷಣ ಸಂಸ್ಥೆಗಳು ಹಾಗು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಸ್ಥೆಗಳ ಅಧ್ಯಯನದ ಪ್ರಕಾರ ಮಂಗಳೂರು ಈಗಾಗಲೇ ಪಂಜಾಬ್‌ನಲ್ಲಿರುವಂತಹ ವಿಷಮ ಪರಿಸ್ಥಿತಿಗೆ ತಲುಪಿದೆ. ಇದು ಹೀಗೆಯೇ ಮುಂದುವರಿದರೆ ಕರ್ನಾಟಕದ ಮಾದಕ ವ್ಯಸನದ ರಾಜಧಾನಿಯಾಗಲಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಈ ಪಿಡುಗು ಯುವಪೀಳಿಗೆಯನ್ನು ಬಲಿತೆಗೆದುಕೊಳ್ಳುತ್ತಿದೆ. ಶಾಲಾ ಕಾಲೇಜುಗಳ ಮಕ್ಕಳು ಈ ಮಾರಕ ವ್ಯಸನಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಲಿ ಬೀಳುತ್ತಿದ್ದಾರೆ. 6, 7ನೇ ತರಗತಿಯ ಮಕ್ಕಳಲ್ಲದೆ ಹೆಣ್ಣು ಮಕ್ಕಳು ಕೂಡ ಈ ವಿನಾಶಕಾರಿ ವ್ಯಸನಕ್ಕೆ ಈಡಾಗುವಂತಹ ಪರಿಸ್ಥಿತಿ ಇದೆ. ದ.ಕ.ಜಿಲ್ಲೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಮಾದಕ ವ್ಯಸನವೂ ಬೇರೂರಿ ಬಿಟ್ಟರೆ ನಾಡಿನ ಪಾಲಿಗೆ ನಿಯಂತ್ರಿಸಲಾಗದ ಸ್ಪೋಟಕ ಪರಿಸ್ಥಿತಿಗೆ ಕಾರಣವಾಗುವ ಅಪಾಯವೂ ಇದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಈ ಮಹಾ ಪಿಡುಗಿನ ವಿರುದ್ಧ ಜಿಲ್ಲೆ ಹಾಗು ನಗರದ ಪೊಲೀಸ್ ಇಲಾಖೆಯು ಈಗಾಗಲೆ ಸಾಕಷ್ಟು ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದೆ. ವಿವಿಧ ಸೇವಾ ಸಂಸ್ಥೆಗಳೂ ತಮ್ಮಿಂದ ಸಾಧ್ಯವಿರುವ ಕೆಲಸ ಮಾಡುತ್ತಿವೆ. ಆದರೂ ಜಿಲ್ಲೆಯ ಜನರಲ್ಲಿ ವಿಶೇಷವಾಗಿ ಪೋಷಕರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿಯ ಕೊರತೆ ಎದ್ದು ಕಾಣುತ್ತಿವೆ. ಅದಕ್ಕಾಗಿ ಜನರಿಗೆ ಭಾವನಾತ್ಮಕವಾಗಿ ತಲುಪಲು ಸಾಧ್ಯವಿರುವ ಮಂದಿರ, ಮಸೀದಿ, ಚರ್ಚುಗಳ ಮೂಲಕ ಜಾಗೃತಿ ಅಭಿಯಾನ ನಡೆಸಲಾಗುವುದು. ವ್ಯಸನಿಗಳಿಗೆ ಅದರಿಂದ ಮುಕ್ತರಾಗಲು ನೆರವಾಗುವುದು ಮತ್ತು ಹೊಸ ವ್ಯಸನಿಗಳು ಸೃಷ್ಟಿಯಾಗದಂತೆ ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕರ್ನಾಟಕ ಮುಸ್ಲಿಂ ಜಮಾಅತ್‌ನ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಗೋಳ್ತಮಜಲು ಮುಹಮ್ಮದ್ ಹನೀಫ್ ಹಾಜಿ, ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಉಪಸ್ಥಿತರಿದ್ದರು.

ಮಾದಕ ದ್ರವ್ಯ ವರ್ಜನ ಕೇಂದ್ರ ಸ್ಥಾಪನೆಯ ಗುರಿ
ಇದು ನಿರಂತರ ನಡೆಸಬೇಕಾದ ಪ್ರಕ್ರಿಯೆಯಾಗಿದೆ. ಹಾಗಾಗಿ ಒಂದು ಹಂತದಲ್ಲಿ ಇದನ್ನು ಜಾಗೃತಿಯ ಮೂಲಕ ದೂರ ಮಾಡಿದರೂ ಕೂಡ ಕಾಲ ಕಳೆದಂತೆ ಯುವ ಜನಾಂಗ ಮತ್ತೆ ಮತ್ತೆ ಅದರತ್ತ ಆಕರ್ಷಣೆಗೊಳಗಾಗುವ ಅಪಾಯವಿದೆ. ಶುಕ್ರವಾರದ ಜುಮಾ ನಮಾಝ್ ಬಳಿಕ ಪ್ರವಚನ, ಜನಜಾಗೃತಿ, ಆಂದೋಲನ, ಮಾಹಿತಿ ಇತ್ಯಾದಿ ಕ್ರಮದೊಂದಿಗೆ ಮಾದಕ ದ್ರವ್ಯ ವರ್ಜನ ಕೇಂದ್ರ ಸ್ಥಾಪಿಸುವ ಗುರಿಯೂ ನಮಗೆ ಇದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News