ಮೂಡುಬಿದಿರೆ: ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್-2019 ಉದ್ಘಾಟನೆ

Update: 2019-12-14 13:53 GMT

ಮೂಡುಬಿದಿರೆ: ಆತ್ಮರಕ್ಷಣೆಯ ಮತ್ತು ಒತ್ತಡ ನಿರ್ವಹಣೆಗೆ ಪೂರಕವಾದ ಕಲೆ ಕರಾಟೆಯಾಗಿದೆ. ಹೆಣ್ಣುಮಕ್ಕಳು ಈ ಕ್ರೀಡೆಯಲ್ಲಿ ವಿಶೇಷವಾದ ತರಬೇತಿಯನ್ನು ಪಡೆಯುವ ಮೂಲಕ ತಮ್ಮ ಆತ್ಮರಕ್ಷಣೆಯನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. 

ಅವರು ಕರ್ನಾಟಕ ಕರಾಟೆ ಡೋ ಸ್ಪೋಟ್ರ್ಸ್ ಅಸೋಸಿಯೇಶನ್ ಮತ್ತು ದ.ಕ ಜಿಲ್ಲಾ ಸ್ಪೋಟ್ರ್ಸ್ ಕರಾಟೆ ಡೋ ಅಸೊಸಿಯೇಶನ್ ಆಶ್ರಯದಲ್ಲಿ ಇಲ್ಲಿನ ನಾರಾಯಣಗುರು ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್ 2019ನ್ನು ಶನಿವಾರ ಉದ್ಘಾಟಿಸಿ  ಮಾತನಾಡಿದರು.

ರಾಜ್ಯ ಕರಾಟೆ ಡೋ ಸ್ಪೋಟ್ರ್ಸ್ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವವರಿಗೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿ ಬೇರೆ ರಾಜ್ಯಗಳಲ್ಲಿಲ್ಲ. ಇಂತಹ ಸಮಸ್ಯೆಗಳಿಗೆ ಸರ್ಕಾರವೂ ಸ್ಪಂದಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಕರಾಟೆ ಅಸೋಸಿಯೇಶನ್‍ನ ಸಂಚಾಲಕ ಈಶ್ವರ ಕಟೀಲು ಮಾತನಾಡಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಎದುರಾಗುವ ಸಮಸ್ಯೆ, ಸವಾಲುಗಳ ಕುರಿತು ಎಲ್ಲ ಕರಾಟೆ ಸಂಘಟನೆಗಳು, ಶಿಕ್ಷಕರು ಒಟ್ಟಾಗಿ ಕುಳಿತು ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡುಕೊಂಡು ಸರ್ಕಾರದ ಗಮನಸೆಳೆಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಅಬುಲ್ ಆಲಾ ಪುತ್ತಿಗೆ, ಕರಾಟೆ ಅಸೋಸಿಯೇಶನ್‍ನ ರಾಜ್ಯ ಕಾರ್ಯದರ್ಶಿ ಕೀರ್ತಿ ಜಿ.ಕೆ. ರಾಷ್ಟ್ರೀಯ ಕರಾಟೆ ಅಸೋಸಿಯೇಶನ್‍ನ ಮುಖ್ಯ ರೆಫ್ರಿ ಡೊಮಿನಿಕ್ ಸೆವಿಯೋ, ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ಮಾಜಿ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಭಾಗವಹಿಸಿದರು. ಜಿಲ್ಲಾ ಕರಾಟೆ ಅಸೋಸಿಯೇಶನ್‍ನ ಅಧ್ಯಕ್ಷ ನದೀಂ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗೂ ವಿವಿಧ ಜಿಲ್ಲೆಗಳ ಕರಾಟೆ ಅಸೋಸಿಯೇಶನ್‍ನ ಪಧಾಧಿಕಾರಿಗಳು, ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಧನಂಜಯ ಶೆಟ್ಟಿ ಸ್ವಾಗತಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ವಂದಿಸಿದರು.
ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದಿಂದ 1200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News