ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

Update: 2019-12-14 14:04 GMT

ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ತಾಲೂಕಿನ ಕಣಿಯೂರು ಎಂಬಲ್ಲಿ 3 ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.15 ಸಾವಿರ ದಂದ ವಿಧಿಸಿ ತೀರ್ಪು ನೀಡಿದೆ. 

ಕಣಿಯೂರು ಗ್ರಾಮದ ಕೆದಿಲ ನಿವಾಸಿ ದಿನೇಶ್ ಗೌಡ ಶಿಕ್ಷೆಗೊಳಗಾದ ಅಪರಾಧಿ. 2016ರ ಜುಲೈ 11ರಂದು ಕಣಿಯೂರು ಗ್ರಾಮದ ನಡಾಲು ಎಂಬಲ್ಲಿ ಈ ಘಟನೆ ನಡೆದಿತ್ತು. 

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ದಿನೇಶ್ ಗೌಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಬೆದರಿದ ವಿದ್ಯಾರ್ಥಿನಿ ಬೊಬ್ಬೆ ಹೊಡೆದಿದ್ದ ವೇಳೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿತ್ತು.  ಘಟನೆಯ ಕುರಿತು ಸಂತ್ರಸ್ಥ ವಿದ್ಯಾರ್ಥಿನಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ದಿನೇಶ್ ಗೌಡನನ್ನು ಬಂಧಿಸಿದ್ದರು. ಉಪ್ಪಿನಂಗಡಿ ಠಾಣೆಯ ಆಗಿನ ಎಸ್‍ಐ ತಿಮ್ಮಪ್ಪ ನಾಯ್ಕ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಆತನನ್ನು ಅಪರಾಧಿ ಎಂದು ಪರಿಗಣಿಸಿ ಪೋಕ್ಸೋ ಕಾಯ್ದೆಯಡಿಯ ಅಪರಾಧಕ್ಕಾಗಿ 3ವರ್ಷ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ, ದಂಡ ತೆರಳು ತಪ್ಪಿದಲ್ಲಿ ಆರು ತಿಂಗಳ ಕಾರಾಗೃಹ ಶಿಕ್ಷೆ, ಜೀವ ಬೆದರಿಕೆಯೊಡ್ಡಿದ ಅಪರಾಧಕ್ಕಾಗಿ 1 ವರ್ಷ ಜೈಲು ಶಿಕ್ಷೆ ಮತ್ತು ರೂ.5 ಸಾವಿರ ದಂಡ, ದಂಡ ತೆರಳು ತಪ್ಪಿದಲ್ಲಿ 3 ತಿಂಗಳ ಕರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ರೂ.12 ಸಾವಿರವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News