ದೇಶದ ಆರ್ಥಿಕ ಕುಸಿತದಿಂದ ಬ್ಯಾಂಕ್‌ಗಳಿಗೂ ಸಂಕಷ್ಟ: ಅಮರ್‌ಜಿತ್ ಕೌರ್

Update: 2019-12-14 14:26 GMT

ಮಂಗಳೂರು,ಡಿ.14: ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿಯಿಂದ ಬ್ಯಾಂಕುಗಳು ಸಂಕಷ್ಟದ ಹಾದಿಯಲ್ಲಿದೆ. ದೇಶೀಯ ಬ್ಯಾಂಕುಗಳು ಈ ಸವಾಲನ್ನು ಎದುರಿಸಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕೌರ್ ತಿಳಿಸಿದ್ದಾರೆ.

ನಗರದ ಪಿವಿಎಸ್ ಕಲಾ ಕುಂಜ ಸಭಾಂಗಣದಲ್ಲಿಂದು ಅವರು ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ 19ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಾಗತಿಕ ಆರ್ಥಿಕ ಕುಸಿತವಾದ ಸಂದರ್ಭದಲ್ಲಿ ಭಾರತದ ಬ್ಯಾಂಕ್‌ಗಳ ಸ್ಥಿತಿ ಸುಭದ್ರವಾಗಿತ್ತು. ಆದರೆ ದೇಶದ ಈಗಿನ ಪರಿಸ್ಥಿತಿ ಹಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಬ್ಯಾಂಕ್‌ಗಳು ಹಿಂದಿಗಿಂತ ಹೆಚ್ಚು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ ಪೂರ್ವದಲ್ಲಿ ಅಸ್ವಿತ್ವಕ್ಕೆ ಬಂದಿರುವ ಎಐಟಿಯುಸಿ ಸ್ವಾತಂತ್ರ ಹೋರಾಟದಲ್ಲಿ ಮತ್ತು ಕಾರ್ಮಿಕ ಹೋರಾಟದಲ್ಲಿ 1920ರಿಂದ ಮುಂಚೂಣಿಯಲ್ಲಿದ್ದ ಸಂಘಟನೆಯಾಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸ್ವರಾಜ್ಯ ಬೇಕು ಎನ್ನುವ ನಿರ್ಧಾರವನ್ನು ಮಾಡಿ ಕಾರ್ಮಿಕರ ಹಕ್ಕುಗಳಿಗೆ ಜೊತೆ ಜೊತೆಯಾಗಿ ಹೋರಾಟ ಮಾಡುತ್ತಾ ಬಂದ ಎಐಟಿಯುಸಿಯ ಸ್ಥಾಪಕರಾದ ಲಾಲಾ ಲಜಪತ್‌ರಾಯ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಲಾಠಿ ಏಟಿಗೂ ಹೆದರದೆ ಹೋರಾಟ ಮಾಡಿದವರು. ಅಂತಹ ಮುಖಂಡರ ಚರಿತ್ರೆಯನ್ನು ಹೊಂದಿರುವ ಎಐಟಿಯುಸಿ ದೇಶದ ಚರಿತ್ರೆಯನ್ನು ತಿರುಚುವ, ಆರ್ಥಿಕ ಪರಿಸ್ಥಿತಿಯನ್ನು ಕೆಳಸ್ಥಿತಿಗೆ ತಂದಿರುವ ಮತ್ತು ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುತ್ತಿರುವವರ ಸವಾಲುಗಳನ್ನು ಎದುರಿಸಿ ಹೊರಾಟ ನಡೆಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದರು.

"ಬಹುತ್ವ ದೇಶದ ಜೀವಾಳ"

ದೇಶದ ಬಹುತ್ವ, ವಿವಿಧ ಸಂಸ್ಕೃತಿ, ಧರ್ಮದ ಜನರು ಜೊತೆಯಾಗಿ ವೈವಿಧ್ಯತೆಯ ಜೊತೆ ಕಟ್ಟಿಕೊಂಡ ಚರಿತ್ರೆಯೇ ದೇಶದ ಜೀವಾಳ. ಅದನ್ನು ನಾಶ ಮಾಡಲು ಪೌರತ್ವ ತಿದ್ದುಪಡಿಯಂತಹ ಕಾಯಿದೆಯನ್ನು ಜಾರಿಗೆ ತರಲು ಸರಕಾರ ಹೊರಟಿರುವುದರ ವಿರುದ್ಧ ಕಾರ್ಮಿಕ ಸಂಘಟನೆಯಾಗಿ ಸಿಐಟಿಯು ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ಕಾರ್ಮಿಕ ಸಂಘಟನೆಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಳ್ಳಲು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಳೆದಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದಾಗ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳು, ಅದೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ವಿರೋಧಿಸಿತ್ತು. ಪ್ರಜಾಪ್ರಭುತ್ವ ಇದೆ ಎನ್ನುವುದು ಈ ದೇಶದಲ್ಲಿ ವ್ಯಕ್ತವಾಗಿದೆ. ಇಂತಹ ದೇಶದಲ್ಲಿ ಇಲ್ಲಿನ ವೈವಿಧ್ಯತೆಯನ್ನು ನಾಶಮಾಡಲು, ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ನೀತಿಗಳನ್ನು ಸರಕಾರ ಜಾರಿ ಮಾಡಲು ಹೊರಟಿರುವುದರ ವಿರುದ್ಧ ಬ್ಯಾಂಕ್‌ಗಳ ವಿಲೀನ, ಬಲವಂತದ ನಿವೃತ್ತಿ ಸೇರಿದಂತೆ ಕಾರ್ಮಿಕ ವಿರೋಧಿ ನೀತಿಗಳನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಭೇಕಾಗಿದೆ ಎಂದು ಅಮರ್‌ ಜಿತ್ ಕೌರ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ನಾಗರಾಜನ್,ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ರಾವ್ ಎಂ.ಎಸ್, ಬ್ಯಾಂಕಿನ ಅಧ್ಯಕ್ಷ ಜಯರಾಮ ಭಟ್, ಎಐಕೆಬಿಇಎಯ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಕಾರಂತ್, ಅಖಿಲಭಾರತ ಬ್ಯಾಂಕ್ ಅಧಿಕಾರಿಗಳ ಸಂಗಟನೆಯ ಪ್ರಧಾನ ಕಾರ್ಯದರ್ಶಿ ಮನೀಶ್ ಕೆ.ಎಸ್.ಚೌಹಾಣ್, ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಅಧ್ಯಕ್ಷ ಬಿ.ಜಯರಾಮ ನಾಯ್ಕ್, ಪ್ರಧಾನ ಕಾರ್ಯದರ್ಶಿ ಕೆ.ರಾಘವ ಮೊದಲಾದವರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News