​ರೈತರ ಬದುಕನ್ನು ಹಸನುಗೊಳಿಸುವ ಕೆಲಸವಾಗಲಿ: ಡಾ. ಎಂಎನ್‌ಆರ್

Update: 2019-12-14 14:45 GMT

ಕುಂದಾಪುರ, ಡಿ.14: ದೇಶಾದ್ಯಂತ ರೈತ ಸಮುದಾಯ ಇಂದು ತೀವ್ರವಾದ ಸಂಕಷ್ಟದಲ್ಲಿದೆ. ಇಂಥ ರೈತರ ಬದುಕನ್ನು ಹಸನುಗೊಳಿಸುವ ಹಾಗೂ ಸಂಕಷ್ಟದಲ್ಲಿರುವ ರೈತರನ್ನು ಮೇಲಕ್ಕೆತ್ತುವ ಕೆಲಸ ಇಂದು ತುರ್ತಾಗಿ ಸರಕಾರ ಸೇರಿದಂತೆ ಎಲ್ಲರಿಂದಲೂ ಆಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಶನಿವಾರ ಕುಂದಾಪುರದ ಶ್ರೀವ್ಯಾಸರಾಜ ಕಲಾಮಂದಿರದಲ್ಲಿ ಆಯೋಜಿತವಾದ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ದಿಸೆಯಲ್ಲಿ ಇಂಥ ಸಮ್ಮೇಳನಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಮಷ್ಠಿ ಅಭಿಪ್ರಾಯಗಳನ್ನು ದಾಖಲಿಸುವ ಕಾರ್ಯ ಮಾಡಬೇಕು. ಕೇವಲ ಜನರನ್ನು ಸೇರಿಸುವ ಜಾತ್ರೆಗಳಾಗಿ ಇವು ಸೀಮಿತವಾಗಬಾರದು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿ ಭಾಗವಹಿಸಿದ ಮಂಗಳೂರು ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಮಾತನಾಡಿ, ದೇಶದ ಬೆನ್ನೆಲುಬು ಕೃಷಿ, ಕೃಷಿಯ ಬೆನ್ನೆಲುಬು ರೈತ. ರೈತ ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯದೇ ಹೋದಾಗ ರೈತನ ಬೆನ್ನೆಲುಬು ಮುರಿಯುತ್ತದೆ. ಮಣ್ಣು ಮತ್ತು ರೈತ ಆರೋಗ್ಯವಾಗಿದ್ದರೆ ಮಾತ್ರ ಸಮಾಜ ಹಾಗೂ ದೇಶದ ಆರೋಗ್ಯ ಸ್ಥಿರವಾಗಿರುತ್ತದೆ ಎಂದರು.

ಆದರೆ ಇಂದು ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕಗಲ ಬಳಕೆ ಹೆಚ್ಚಾಗಿರುವುದರಿಂದ ಮಣ್ಣಿನ ಫಲವತ್ತತೆ ದಿನೇದಿನ ಕ್ಷೀಣಿಸುತ್ತಿದೆ.ನಗರ, ಮಹಾನಗರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತಿದ್ದ ಕ್ಯಾನ್ಸರ್‌ನಂಥ ಕಾಯಿಲೆ ಇಂದು ಗ್ರಾಮೀಣ ಭಾಗಗಳಿಗೂ ವಿಸ್ತರಿಸುತ್ತಿರುವುದು ಅತ್ಯಂತ ಆತಂಕದ ವಿಷಯ ಎಂದರು.

ಉಡುಪಿ ಜಿಲ್ಲಾ ಭಾಕಿಸಂನ ವರದಿ ಮಂಡಿಸಿದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ, ಜಿಲ್ಲೆಯ ರೈತರಿಗೆ ಉತ್ತಮ ಗುಣಮಟ್ಟದ, ಅಗತ್ಯಕ್ಕನುಗುಣವಾಗಿ ವಿದ್ಯುತ್ ದೊರೆಯುತ್ತಿದೆ.ಸುಮಾರು 4,800 ಕುಟುಂಬಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ತೆಂಗು ಉತ್ಪಾದಕರ ಕಂಪೆನಿ ಯನ್ನು ಪ್ರಾರಂಭಿಸಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿಯಿಂದಲೂ ರೈತರಿಗೆ ಸಾಕಷ್ಟು ಸವಲತ್ತು ಸಿಕ್ಕಿದೆ.

ಎಂಡೋಸಲ್ಫಾನ್, ವಾರಾಹಿ, ಕಸ್ತೂರಿರಂಗನ್ ವರದಿ, ಅಡಿಕೆ ಕೊಳೆರೋಗ, ಪ್ರಾಕೃತಿಕ ವಿಕೋಪ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯ ಪುನರುಜ್ಜೀವನದ ಕುರಿತು ಸಂಘಟನೆ ಹೊೀರಾಟವನ್ನು ಕೈಗೊಂಡಿದೆ ಎಂದರು.

ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇಗೌಡ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ, ಜಿಲ್ಲಾ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್ ಪಾಂಗಾಳ, ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ಪಾಂಡುರಂಗ ಹೆಗ್ಡೆ ಕುತಾ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಜೈನ್ ನಿಟ್ಟೆ ಸ್ವಾಗತಿಸಿದರೆ, ಕಾರ್ಕಳ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News