ಪಕ್ಷಿಕೆರೆ: ಮದ್ರಸ ವಿದ್ಯಾರ್ಥಿನಿಯ ಅಡ್ಡಗಟ್ಟಿದ ಮುಖವಾಡ ಧರಿಸಿದ್ದ ದುಷ್ಕರ್ಮಿಗಳು; ದೂರು

Update: 2019-12-14 16:18 GMT

ಮಂಗಳೂರು, ಡಿ.14: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಮದ್ರಸ ವಿದ್ಯಾರ್ಥಿನಿಯನ್ನು ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ ಕಿರುಕುಳ ನೀಡಿದ ಘಟನೆ ಶುಕ್ರವಾರ ರಾತ್ರಿ ಪಕ್ಷಿಕೆರೆ ಚರ್ಚ್ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಘಟನೆಯ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 ವರ್ಷದ ಬಾಲಕಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಮದ್ರಸ ಬಿಟ್ಟು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿಯ ಕೈಗೆ ಟೆವೆಲ್‌ ನಿಂದ ಕಟ್ಟಿದರು ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಬಾಲಕಿ ಬೊಬ್ಬೆ ಹೊಡೆದಾಗ ಹೆದರಿದ ದುಷ್ಕರ್ಮಿಗಳು ಟೆವಲ್ ಬಿಚ್ಚಿ ಯಾರಲ್ಲೂ ಹೇಳಬೇಡ ಎಂದು ಹೇಳಿ ಪರಾರಿಯಾದರು ಎಂದು ತಿಳಿದು ಬಂದಿದೆ. ಅದೇ ದಾರಿಯಲ್ಲಿ ಗಸ್ತುನಿರತ ಪೊಲೀಸರು ತಕ್ಷಣ ಆಗಮಿಸಿ ಬಾಲಕಿಯನ್ನು ರಕ್ಷಿಸಿ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.

ಈಕೆ ತನ್ನ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸ್ಥಳೀಯ ಮದ್ರಸದ 6ನೆ ತರಗತಿಯಲ್ಲಿ ಕಲಿಯುತ್ತಿದ್ದು, ಪ್ರತೀ ದಿನ ರಾತ್ರಿ ಖಾಸಗಿ ವಾಹನದಲ್ಲಿ ಮನೆಗೆ ತಲುಪುತ್ತಿದ್ದಳು. ಶುಕ್ರವಾರ ರಾತ್ರಿ ಯಾವುದೇ ವಾಹನ ಸಿಗದ ಕಾರಣ ನಡೆದುಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಮುಖಕ್ಕೆ ಬಟ್ಟೆ ಧರಿಸಿ ಗುರುತು ಮರೆಮಾಚಿದ್ದ ಆರೋಪಿಗಳು ದುಷ್ಕೃತ್ಯ ಎಸಗಲು ಪ್ರಯತ್ನಿಸಿದ್ದರೂ ಬಾಲಕಿಯ ಸಕಾಲಿಕ ಮುನ್ನೆಚ್ಚರಿಕೆಯಿಂದ ಹೆದರಿ ಪಲಾಯನಗೈದಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಬಾಲಕಿಯ ತಂದೆ ಘಟನೆಯ ನಡೆದ ತಕ್ಷಣ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಮಂಗಳೂರು ಉತ್ತರ ವಲಯ ಎಸಿಪಿ ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಇಂತಹ ಕೃತ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News