ಗುವಾಹಟಿ ಪರಿಸ್ಥಿತಿಯತ್ತ ಬಿಸಿಸಿಐ, ಅಸ್ಸಾಂ ಕ್ರಿಕಟ್ ತೀವ್ರ ನಿಗಾ

Update: 2019-12-14 18:05 GMT

ಹೊಸದಿಲ್ಲಿ, ಡಿ.14: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾದ ನಡುವೆ ಜ.5ರಂದು ನಿಗದಿಯಾಗಿರುವ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಹಾಗೂ ಅಸ್ಸಾಂ ಕ್ರಿಕೆಟ್ ಸಂಸ್ಥೆ(ಎಸಿಎ)ಗುವಾಹಟಿಯ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿವೆ.

ಮೂರು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯನ್ನಾಡಲು ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡ ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನಾಡಲಿದೆ. ಆದರೆ ನಗರದ ಈಗಿನ ಪರಿಸ್ಥಿತಿಯು ಪಂದ್ಯ ನಡೆಯುವ ಬಗ್ಗೆ ಸಂಶಯ ಹುಟ್ಟುಹಾಕಿದೆ.

‘‘ಈಗಿನ ಪರಿಸ್ಥಿತಿಯಲ್ಲಿ ಗುವಾಹಟಿಯಲ್ಲಿ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ನಡೆಯುತ್ತದೆಯೋ,ಇಲ್ಲವೋ ಎಂಬ ಕುರಿತು ಹೇಳಿಕೆ ನೀಡಲಾರೆ. ರಾಜ್ಯ ಪೊಲೀಸ್, ಗೃಹ ಸಚಿವಾಲಯಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. ನಾವು ಇನ್ನಷ್ಟು ಸಮಯ ಕಾಯುತ್ತೇವೆ. ಪಂದ್ಯ ನಡೆಯಲು ಇನ್ನೂ ಮೂರು ವಾರಗಳು ಬಾಕಿ ಇವೆ. ಹೀಗಾಗಿ ನಮಗೆ ವಿಶ್ವಾಸವಿದೆ’’ ಎಂದು ಅಸ್ಸಾಂ ಸಿಎ ಉಪಾಧ್ಯಕ್ಷ ಪರೀಕ್ಷಿತ್ ದತ್ತ ಹೇಳಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ತಂಡವೊಂದಕ್ಕೆ ಭದ್ರತೆ ಒದಗಿಸಬೇಕಾಗಿರುವ ಕಾರಣ ಬಿಸಿಸಿಐ ಹಾಗೂ ಎಸಿಎ ಹೆಚ್ಚಿನ ಎಚ್ಚರಿಕೆವಹಿಸುವ ಅಗತ್ಯವಿದೆ. ಗುವಾಹಟಿಯಲ್ಲಿ ನಡೆದ ತೀವ್ರ ಪ್ರತಿಭಟನೆಯ ಕಾರಣದಿಂದ ಅಸ್ಸಾಂ ಹಾಗೂ ಸರ್ವಿಸಸ್ ತಂಡಗಳ ನಡುವೆ ನಡೆಯಬೇಕಾಗಿದ್ದ ರಣಜಿ ಟ್ರೋಫಿಯ ನಾಲ್ಕನೇ ದಿನ ಪಂದ್ಯ ರದ್ದಾಗಿತ್ತು. ಆಟಗಾರೆಲ್ಲರೂ ಹೊಟೇಲ್‌ನಲ್ಲೇ ಉಳಿದಿದ್ದರು.

 ಅಸ್ಸಾಂ ಹಾಗೂ ಒಡಿಶಾ ನಡುವೆ ನಡೆಯಬೇಕಾಗಿದ್ದಅಂಡರ್-19 ಕೂಚ್ ಬಿಹಾರ್ ಟ್ರೋಫಿ ಪಂದ್ಯವೂ ರದ್ದುಗೊಳಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News