ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್

Update: 2019-12-14 18:13 GMT

ಡರ್ಬನ್,ಡಿ.14: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ವಿಕೆಟ್‌ಕೀಪರ್ ಮಾರ್ಕ್ ಬೌಚರ್ ನೇಮಕವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಡಿ.26ರಿಂದ ಸ್ವದೇಶದಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಬೌಚರ್ ಕೋಚ್ ಆಗಿ ಆಯ್ಕೆಯಾಗಿದ್ದನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಶನಿವಾರ ದೃಢಪಡಿಸಿದೆ.

ಪ್ರಭಾರ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಶನಿವಾರ ದಕ್ಷಿಣ ಆಫ್ರಿಕಾದ ಹಂಗಾಮಿ ಕೋಚ್ ಆಗಿ ಬೌಚರ್‌ರನ್ನು ಆಯ್ಕೆ ಮಾಡಿದ್ದಾರೆ. ಬೌಚರ್‌ಗೆ 2023ರ ತನಕ ಕೋಚ್ ಗುತ್ತಿಗೆ ನೀಡಲಾಗಿದೆ.ಸ್ಮಿತ್ ಹಗೂ ಬೌಚರ್ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದಲ್ಲಿ ದಶಕಗಳ ಕಾಲ ಒಟ್ಟಿಗೆ ಆಡಿದ್ದರು. ಶ್ರೀಲಂಕಾ ಹಾಗೂ ಭಾರತ ವಿರುದ್ಧ ಸತತ ಐದು ಟೆಸ್ಟ್ ಪಂದ್ಯಗಳನ್ನು ಸೋತಿರುವ ದಕ್ಷಿಣ ಆಫ್ರಿಕಾವನ್ನು ಗೆಲುವಿನ ಹಳಿಗೆ ತರುವುದು ಬೌಚರ್‌ಗಿರುವ ದೊಡ್ಡ ಸವಾಲಾಗಿದೆ.

ಬೌಚರ್ ದಕ್ಷಿಣ ಆಫ್ರಿಕಾದ ಪರ 147 ಟೆಸ್ಟ್ ಪಂದ್ಯಗಳನ್ನಾಡಿದ್ದು ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್ ಆಗಿ 999 ವಿಕೆಟ್ ಬಲಿ ಪಡೆದಿದ್ದಾರೆ. ಇದೊಂದು ವಿಶ್ವ ದಾಖಲೆಯಾಗಿ ಉಳಿದಿದೆ. ಲೆಜೆಂಡ್ ಆಲ್‌ರೌಂಡರ್ ಜಾಕ್ ಕಾಲಿಸ್ ಸದ್ಯೋಭವಿಷ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎಂದು ಕ್ರಿಕ್‌ಇನ್‌ಫೋ ವೆಬ್‌ಸೈಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News