‘ಕಲಿತದ್ದು ಕಲಿಸಿದ್ದು’ ಸಾಂಸ್ಕೃತಿಕ ಚರಿತ್ರೆಯ ದಾಖಲಾತಿ: ಪ್ರೊ ಎ.ವಿ.ನಾವಡ

Update: 2019-12-15 14:27 GMT

ಮಂಗಳೂರು, ಡಿ.15: ಕರಾವಳಿಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಚರಿತ್ರೆಯ ದಾಖಲಾತಿ ಕೊರತೆ ಇದೆ. ಇದನ್ನು ನೀಗಿಸುವಲ್ಲಿ ಡಾ. ಬಿ.ಎ. ವಿವೇಕ ರೈ ಅವರ ‘ಕಲಿತದ್ದು ಕಲಿಸಿದ್ದು’ ಕೃತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ವಿ.ನಾವಡ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಸಾವಣ್ಣ ಪ್ರಕಾಶನ, ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ ನಗರದ ಕೊಡಿಯಾಲ್‌ಬೈಲ್ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಜರಗಿದ ಡಾ. ಬಿ.ಎ.ವಿವೇಕ ರೈ ಅವರ ‘ಕಲಿತದ್ದು ಕಲಿಸಿದ್ದು’ ಕೃತಿಯ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಲಿತದ್ದು ಕಲಿಸಿದ್ದು’ ಕೃತಿಯು ಕೇವಲ ಆತ್ಮಕತೆಯಲ್ಲ, ಅದೊಂದು ಸಾಂಸ್ಕೃತಿಕ ಚಿತ್ರಣವೂ ಆಗಿದೆ. ಹಾಗಾಗಿ ಈ ಕೃತಿ ಕರಾವಳಿಯ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನ ದೃಷ್ಟಿಯಲ್ಲಿ ಆಕರ ಕೋಶವಾಗಲಿದೆ. ಇಲ್ಲಿನ ನೆನಪುಗಳನ್ನು ಗಟ್ಟಿಗೊಳಿಸಲು ಇಂತಹ ಕೃತಿಗಳ ಅಗತ್ಯವಿದೆ. ವಿಶ್ವವಿದ್ಯಾನಿಲಯದ ಮೂಲಕ ತುಳು ಅಧ್ಯಯನ, ಕನ್ನಡಕ್ಕಾಗಿ ವಿದೇಶದಲ್ಲಿ ಹೆಚ್ಚು ಕೆಲಸ ಮೊದಲಾದ ಸಾಧನೆಗಳನ್ನು ಮಾಡಿರುವ ಡಾ. ಬಿ.ಎ ವಿವೇಕ ರೈ ವಿಶ್ವಮಾನವನಾಗಿ ಬೆಳೆದಿದ್ದಾರೆ ಎಂದು ಎವಿ ನಾವಡ ಹೇಳಿದರು.

ಕೃತಿ ಬಿಡುಗಡೆಗಳಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಾ.ಪಿ.ಈಶ್ವರ ಭಟ್ ‘ಈ ಕೃತಿಯು ಕಲಿಕೆ, ಕಲಿಸುವಿಕೆಯ ನಿರೂಪಣೆಯ ಜತೆಗೆ ಸಾಮಾಜಿಕ ಬದಲಾವಣೆಯನ್ನು ಕೂಡ ಬಯಸಿದೆ. ಸಾಮರಸ್ಯದ ಬದುಕನ್ನು ಕೂಡ ಅನಾವರಣಗೊಳಿಸುತ್ತದೆ’ ಎಂದು ಹೇಳಿದರು.

ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಸ್ವಾಗತಿಸಿದರು. ಶಶಿರಾಜ್ ರಾವ್ ಕಾವೂರು ವಂದಿಸಿದರು. ಡಾ. ಆರ್.ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಶಾಲೆ ಉಳಿಸುವ ಸಂದೇಶ

ಕಾರ್ಯಕ್ರಮದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಸಂದೇಶವನ್ನೂ ಸಾರಲಾಯಿತು. ಕನ್ನಡ ಶಾಲೆಯ ಆಕೃತಿಯೊಂದರೊಳಗೆ ಕೃತಿಯ ಹೆಸರಿನ ಅಕ್ಷರಗಳ ಮಾದರಿಯನ್ನು ಹಾಕಿ ಅನಂತರ ಆ ಆಕೃತಿ (ಶಾಲೆ)ಯೊಳಗಿನಿಂದ ಕೃತಿಯನ್ನು ಹೊರ ತೆಗೆದು ಲೋಕಾರ್ಪಣೆಗೊಳಿಸಲಾಯಿತು. ವಿವೇಕ ರೈಯ ಬಾಲ್ಯದ ಸಹಪಾಠಿಗಳಾದ ಪುಣಚದ ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ ಮತ್ತು ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಗೋಪಾಲಕೃಷ್ಣ ಪುತ್ತೂರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಡಾ. ಬಿ.ಎ ವಿವೇಕ ರೈ ಇಂಗ್ಲಿಷ್ ಮಾಧ್ಯಮದ ಪ್ರವಾಹಕ್ಕೆ ಸರಕಾರವೇ ಪ್ರೋತ್ಸಾಹ ನೀಡುತ್ತಿದೆ. ಸರಕಾರಿ, ಖಾಸಗಿ ಸಹಿತ ಕನ್ನಡ ಶಾಲೆಗಳಿಗೆ ಶಿಕ್ಷಕರು, ಅನುದಾನ ಒದಗಿಸದೆ ಆ ಶಾಲೆಗಳು ಮುಚ್ಚುವಂತೆ ಮಾಡುತ್ತಿದೆ. ಪ್ರಾಥಮಿಕ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿಯೇ ಇರುವುದು ಅನಿವಾರ್ಯವಲ್ಲ. ಕನ್ನಡ ಮಾಧ್ಯಮದಲ್ಲಿ ಓದಿರುವ ನಾವೇ ದೇಶದ ವಿವಿಧೆಡೆ ಇಂಗ್ಲಿಷ್ ಪಾಠ ಮಾಡಿದ್ದೇವೆ. ಕರಾವಳಿಯಲ್ಲಿ ಅಡಿಕೆ ತೋಟದಿಂದ ಬಂದ ಹಣದಿಂದ, ಮನೆಯವರ ಒಡವೆ ಅಡವಿಗಿಟ್ಟು ಶಾಲೆ ಆರಂಭಿಸಿರುವ ಪರಂಪರೆ ಇದೆ. ಆದರೆ ಈಗ ಹಣಕ್ಕಾಗಿ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಉಳ್ಳವರು ತಮ್ಮ ವೈಭವಕ್ಕೆ ಖರ್ಚು ಮಾಡುವ ಒಂದು ಪಾಲನ್ನು ಕನ್ನಡ ಶಾಲೆಗಳನ್ನು ಉಳಿಸುವುದಕ್ಕಾಗಿ ನೀಡಿದರೆ ನೂರಾರು ಶಾಲೆಗಳನ್ನು ಉಳಿಸಬಹುದು. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದರು.

ಸನ್ಮಾನ

ವಿವೇಕ ರೈ ಕಲಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಕುಟುಂಬದವರಾದ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಸಿ.ಶ್ರೀಹರ್ಷ ಶಾಸ್ತ್ರಿ, ಪುತ್ತೂರು ಬೋರ್ಡ್ ಹೈಸ್ಕೂಲ್‌ನ ಹೆಡ್‌ಮಾಸ್ಟರ್ ಆಗಿದ್ದ ಎಂ. ಅಣ್ಣಪ್ಪ ಅವರ ಮಗ ರತನ್ ಕುಮಾರ್ ಕೆ.ಪುತ್ತೂರು, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹ, ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಮತ್ತು ಮಂಗಳಗಂಗೋತ್ರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಎಸ್.ವಿ.ಪರಮೇಶ್ವರ ಭಟ್ಟ ಅವರ ಪುತ್ರ ಎಸ್.ಪಿ.ರಾಮಚಂದ್ರ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News