ಮಂಗಳೂರು ವಿವಿಯ 210 ಕಾಲೇಜುಗಳಲ್ಲಿ ಯೋಧರ ಸ್ಮಾರಕ -ಪಿ.ಎಸ್.ಯಡಪಡಿತ್ತಾಯ

Update: 2019-12-16 07:53 GMT

ಮಂಗಳೂರು, ಡಿ.16: ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕೊಡಗು,ದ.ಕ ಮತ್ತು ಉಡುಪಿ ಜಿಲ್ಲೆಯ 210 ಕಾಲೇಜು ಗಳಲ್ಲಿ ಯೋಧರ ಸ್ಮಾರಕ ಸ್ಥಾಪಿಸುವ ಗುರಿ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ  ಕುಲಪತಿ ಪಿ.ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.

ಕದ್ರಿ ಉದ್ಯಾನವನದ ಬಳಿಯ ಯೋಧರ ಸ್ಮಾರಕ ದ ಬಳಿ ಜಿಲ್ಲಾಡಳಿತ, ದ.ಕ ಜಿಲ್ಲಾ ಮಾಜಿ ಯೋಧರ ಸಂಘ, ಶ್ರಿ ಶಾಸ್ತಾವು ಭೂತನಾಥೇಶ್ವರ  ದೇವಸ್ಥಾನ ಮತ್ತು ಲಯನ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯ ದಲ್ಲಿ ಹಮ್ಮಿಕೊಂಡ ವಿಜಯ ದಿವಸ್ ಕಾರ್ಯಕ್ರಮದ ಅಂಗವಾಗಿ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾತನಾಡುತ್ತಾ, ದೇಶ ರಕ್ಷಣೆ ಯಲ್ಲಿ ತೊಡಗಿರುವ ಯೋಧರನ್ನು ನಾವು ಮತ್ತು ನಮ್ಮ ಯುವಜನರು, ವಿದ್ಯಾರ್ಥಿಗಳು ಸದಾ ನೆನಪಿಸಿಕೊಳ್ಳಬೇಕು ಎಂದರು. ಭಾರತ ಪಾಕಿಸ್ತಾನ ನಡುವೆ 1971ರಲ್ಲಿ ನಡೆದ ಯುದ್ಧ ಮತ್ತು 1971ರಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧ ಜಯ ಸಾಧಿಸಿದ ವಿಜಯ ದಿವಸದ ಬಗ್ಗೆ ಕ.ಶರತ್ ಭಂಡಾರಿ ವಿವರಿಸಿದರು.

ಯೋಧರ ಸಂಘದ ಅಧ್ಯಕ್ಷ ಎಸ್.ಎಂ. ಐರನ್ನಾ, ಯೋಧರ ಸಂಘಟನಾ ಸಮಿತಿ ಅಧ್ಯಕ್ಷ ಕೆ.ಶರತ್ ಭಂಡಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ಮನಪಾ ಅಧಿಕಾರಿ ಅಜಿತ್ ಕುಮಾರ್ ಹೆಗ್ಡೆ, ಇಂಡಿಯನ್ ಕೋಸ್ಟ್ ಗಾರ್ಡ್ ಪಣಂಬೂರು ವಿಭಾಗದ ಕಮಾಂಡರ್ ಸುರೇಂದ್ರ ಸಿಂಗ್ ದಸಿಲಾ ಮೊದಲಾದವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News