ಪ್ರತಿಭಟನೆ ವೇಳೆ 'ಹಿಂದೂ ವಿರೋಧಿ' ಘೋಷಣೆ ಕೂಗಿದರೇ ಆಲಿಘಡ ಮುಸ್ಲಿಂ ವಿವಿ ವಿದ್ಯಾರ್ಥಿಗಳು?

Update: 2019-12-19 08:51 GMT

ಹಿಂದೂ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು) ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಂತೋಷ್ ರಂಜನ್ ರೈ ಈ ವಿಡಿಯೊ ಪೋಸ್ಟ್ ಮಾಡಿ, "ಎಎಂಯು ಎದೆಯಲ್ಲಿ ಹಿಂದೂಗಳ ಸಮಾಧಿ ತೋಡಲಾಗುತ್ತಿದೆ. ಇದನ್ನು ನಾವು ಭಾರತದಲ್ಲಿ ಕೇಳುತ್ತಿದ್ದೇವೆ" ಎಂಬ ಒಕ್ಕಣೆ ನೀಡಿದ್ದರು.

ವಾಸ್ತವ ಏನು?

ಈ ಬಗ್ಗೆ ವಾಸ್ತವಾಂಶವನ್ನು Alt News ಬಹಿರಂಗಪಡಿಸಿದೆ. ಗೂಗಲ್ ನಲ್ಲಿ ಈ ಬಗ್ಗೆ ಸರ್ಚ್ ಮಾಡಿದಾಗ  ಉತ್ತಮ ಧ್ವನಿ ಮತ್ತು ಗುಣಮಟ್ಟದ ದೃಶ್ಯ ಒಳಗೊಂಡ ಅದೇ ವಿಡಿಯೊ ಸಿಕ್ಕಿದೆ. ಈ ವಿಡಿಯೋವನ್ನು ವೀಕ್ಷಿಸಿದಾಗ ಬಿಜೆಪಿ ನಾಯಕರು ವೈರಲ್ ಮಾಡುತ್ತಿರುವ ವಿಡಿಯೋ ತಿರುಚಿದ್ದು ಮತ್ತು ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ವಾಸ್ತವವಾಗಿ ಅವರು ಘೊಷಣೆಗಳನ್ನು ಕೂಗುತ್ತಿರುವುದು 'ಹಿಂದುತ್ವ; ಸಾವರ್ಕರ್, ಬಿಜೆಪಿ, ಬ್ರಾಹ್ಮಣ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧವೇ ಹೊರತು ಹಿಂದೂಗಳ ವಿರುದ್ಧ ಅಲ್ಲ. ವಿಡಿಯೋವನ್ನು ತಿರುಚಿ 'ಹಿಂದುತ್ವ' ಎನ್ನುವ ಶಬ್ಧವನ್ನು 'ಹಿಂದು' ಎಂದು ಬದಲಿಸಲಾಗಿದೆ.

"ಎಎಂಯು ಎದೆಯಲ್ಲಿ ಹಿಂದುತ್ವದ ಸಮಾಧಿ ತೋಡಲಾಗುತ್ತಿದೆ. ಸಾವರ್ಕರ್ ಸಮಾಧಿಯನ್ನು ಎಎಂಯು ಎದೆಯಲ್ಲಿ ತೋಡಲಾಗುತ್ತಿದೆ; ಬಿಜೆಪಿಯ ಸಮಾಧಿಯನ್ನು ಎಎಂಯು ಎದೆಯಲ್ಲಿ ತೋಡಲಾಗುತ್ತಿದೆ; ಬ್ರಾಹ್ಮಣ್ಯದ ಸಮಾಧಿಯನ್ನು ಎಎಂಯು ಎದೆಯಲ್ಲಿ ತೋಡಲಾಗುತ್ತಿದೆ; ಜಾತೀಯತೆಯ ಸಮಾಧಿಯನ್ನು ಎಎಂಯು ಎದೆಯಲ್ಲಿ ತೋಡಲಾಗುತ್ತಿದೆ" ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ಈ ವಿಡಿಯೊವನ್ನು 2019ರ ಡಿಸೆಂಬರ್ 12ರಂದು ಅಪ್‍ ಲೋಡ್ ಮಾಡಲಾಗಿದೆ ಎನ್ನುವುದು ಗಮನಾರ್ಹ.

ಎಲ್ಲಕ್ಕಿಂತ ಹೆಚ್ಚಾಗಿ ವೈರಲ್ ಆದ ವಿಡಿಯೊವನ್ನು ಮೂಲ ವಿಡಿಯೊ ಜತೆ ತಾಳೆ ನೋಡಿದಾಗ, ಮೂಲ ವಿಡಿಯೊವನ್ನು ಝೂಮ್-ಇನ್ ಮಾಡಿ ತಿರುಚಿ ಪೋಸ್ಟ್ ಮಾಡಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ವೈರಲ್ ಆದ ವಿಡಿಯೊದಲ್ಲಿ ಧ್ವನಿಯ ಗುಣಮಟ್ಟ ತೀರಾ ಕಳಪೆಯಾಗಿದೆ.

ಬಲಬದಿಯ ಚಿತ್ರದಲ್ಲಿ ಕಾಣುವಂತೆ, ಇಡೀ ಗೇಟು ಹಿಂಭಾಗದಲ್ಲಿ ಕಾಣಿಸುತ್ತದೆ. ಆದರೆ ಇದೀಗ ವೈರಲ್ ಆದ ವಿಡಿಯೊದಲ್ಲಿ ಈ ದೃಶ್ಯ ಕಾಣಿಸುವುದಿಲ್ಲ. ಇದರ ಸ್ಕ್ರೀನ್‍ ಶಾಟ್ ಅನ್ನು ಎಡಬದಿಯಲ್ಲಿ ಕಾಣಬಹುದಾಗಿದೆ.

ಸಂಘಪರಿವಾರ ಬೆಂಬಲಿಗರಿಂದ ಸುಳ್ಳಿನ ವೈಭವೀಕರಣ

ಉತ್ತರ ಪ್ರದೇಶ ಬಿಜೆಪಿ ವಕ್ತಾರ ಶಲಬ್ ಮಣಿ ತ್ರಿಪಾಠಿ ಈ ವಿಡಿಯೊ ಪೋಸ್ಟ್ ಮಾಡಿ, "ವಿದ್ಯಾರ್ಥಿಗಳು ಹಿಂದೂಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ. "ಇಂತಹ ಮನೋಪ್ರವೃತ್ತಿಯ ಮತ್ತು ಧ್ವನಿಯ ಜನರಿಗೆ ತಕ್ಕ ಬುದ್ಧಿ ಕಲಿಸಬೇಕು" ಎಂದು ಹೇಳಿದ್ದಾರೆ. ಈ ಟ್ವೀಟ್ ಸುಮಾರು 900 ಬಾರಿ ಮರುಟ್ವೀಟ್ ಆಗಿದೆ. ಬಿಜೆಪಿ ಸದಸ್ಯೆ ರಿಚಾ ಪಾಂಡೆ ಮಿಶ್ರಾ ಕೂಡಾ ಈ ವಿಡಿಯೊವನ್ನು ಇಂಥದ್ದೇ ಪ್ರತಿಪಾದನೆಯೊಂದಿಗೆ ಟ್ವೀಟ್ ಮಾಡಿದ್ದಾರೆ.

ಶಿವಸೇನೆಯ ಮಾಜಿ ಸದಸ್ಯ ರಮೇಶ್ ಸೋಳಂಕಿ ಕೂಡಾ ಇದೇ ವಿಡಿಯೊವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್ ಮಾಡಿದ್ದು, 900 ಬಾರಿ ಮರುಟ್ವೀಟ್ ಆಗಿದೆ.

ದೆಹಲಿ ಬಿಜೆಪಿ ವಕ್ತಾರ ತಜ್ಜೀಂದರ್ ಬಗ್ಗಾ ಈ ವಿಡಿಯೊ ತುಣುಕನ್ನು ಮತ್ತೊಂದು ವಿಡಿಯೊ ಜತೆ ಪೋಸ್ಟ್ ಮಾಡಿದ್ದು, ಇದು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಹಿಂದೂಗಳ ವಂಶವನ್ನು ನಾಶಪಡಿಸಲು ವಿದ್ಯಾರ್ಥಿಗಳು ಗಟ್ಟಿಧ್ವನಿಯಲ್ಲಿ ಕರೆ ಕೊಟ್ಟಿದ್ದಾರೆ" ಎಂದು ಇವರು ಪ್ರತಿಪಾದಿಸಿದ್ದರು.

ಬಿಜೆಪಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಇದೇ ತುಣುಕನ್ನು ಬಗ್ಗಾ ಅವರ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ. ಇತರ ಹಲವು ಮಂದಿ ಸಾಮಾಜಿಕ ಜಾಲತಾಣ ಬಳಕೆದಾರರು, ಟ್ವಿಟರ್ ಮತ್ತು ಫೇಸ್‍ ಬುಕ್‍ನಲ್ಲಿ ಇಂಥದ್ದೇ ಸುಳ್ಳಿನೊಂದಿಗೆ ಶೇರ್ ಮಾಡಿದ್ದಾರೆ.

ಈ ವಿಡಿಯೊದಿಂದ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ವಿದ್ಯಾರ್ಥಿಗಳು ಹಿಂದುತ್ವದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆಯೇ ವಿನಃ ಹಿಂದೂಗಳ ವಿರುದ್ಧವಲ್ಲ. ಹಿಂದೂಗಳ ವಿರುದ್ಧ ಎಎಂಯು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಿದವರಲ್ಲಿ ಬಿಜೆಪಿ ಪದಾಧಿಕಾರಿಗಳು ಕೂಡಾ ಹಲವು ಮಂದಿ ಸೇರಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News