×
Ad

ಅಲಿಗಢ ಮುಸ್ಲಿಂ ವಿ.ವಿ.ಯಲ್ಲಿ ಘರ್ಷಣೆ ಬಳಿಕ 21 ಮಂದಿಯ ಬಂಧನ: ಪೊಲೀಸ್

Update: 2019-12-16 22:32 IST

ಅಲಿಗಢ, ಡಿ. 16: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು) ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ 21 ಮಂದಿಯನ್ನು ಬಂಧಿಸಲಾಗಿದೆ ಹಾಗೂ ವಿಶ್ವವಿದ್ಯಾನಿಲಯದ ಎಲ್ಲ ಹಾಸ್ಟೆಲ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ಆದೇಶ ಜಾರಿ ಮಾಡಲಾಗಿದೆ.

 ‘‘ಈ ವಿಷಯದಲ್ಲಿ ನಾವು 21 ಮಂದಿಯನ್ನು ಬಂಧಿಸಿದ್ದೇವೆ. ಗುರುತಿಸಲಾದ 56 ಮಂದಿ ಹಾಗೂ ಇತರ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ’’ ಎಂದು ಅಲಿಗಢ ಎಸ್‌ಎಸ್‌ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ. ಹಾಸ್ಟೆಲ್‌ನಿಂದ ಸಂಪೂರ್ಣವಾಗಿ ತೆರವುಗೊಳ್ಳುವಂತೆ ಆದೇಶ ನೀಡಿರುವುದರಿಂದ ಯಾವುದೇ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಕಾನೂನು ಪಾಲನಾಧಿಕಾರಿ ಅಫಿಫುಲ್ಲಾಹ್ ಖಾನ್ ತಿಳಿಸಿದ್ದಾರೆ.

 ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ಜಿಲ್ಲೆಗಳಲ್ಲಿರುವ ತಾಯ್ನಾಡಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಸುಮಾರು 40 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆಗ್ರಾ ಎಡಿಜಿ ಅಜಯ್ ಆನಂದ್ ತಿಳಿಸಿದ್ದಾರೆ. ಪೂರ್ವ ಹಾಗೂ ಈಶಾನ್ಯ ರಾಜ್ಯಗಳಿಗೆ ರೈಲುಗಳಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲಿಗಢ, ಶಹರಣಪುರ ಹಾಗೂ ಮೀರತ್‌ನಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.

ರವಿವಾರದ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಪಹರೆ ಬಿಗಿಗೊಳಿಸಲಾಗಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಗಾಢ ಮೌನ ಆವರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಎಲ್ಲ ಪ್ರವೇಶ ದ್ವಾರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ನಗರ) ಅಭಿಷೇಕ್ ತಿಳಿಸಿದ್ದಾರೆ.

ಜಮಲ್‌ಪುರದಂತಹ ವಿಶ್ವವಿದ್ಯಾನಿಲಯದ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲ ಉದ್ಯಮ ಸ್ಥಾಪನೆಗಳು ಮುಚ್ಚಿವೆ. ಅತಿಸೂಕ್ಷ್ಮ ಮೇಲಿನ ಬಂದರು ಪ್ರದೇಶ ಸೇರಿದಂತೆ ಹಳೆ ನಗರದ ಮಾರುಕಟ್ಟೆ ಬಂದ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News