ಬಿಡಬ್ಲ್ಯುಎಫ್ ರ‍್ಯಾಂಕಿಂಗ್: ಲಕ್ಷ ಸೇನ್ ಜೀವನಶ್ರೇಷ್ಠ ಸಾಧನೆ

Update: 2019-12-17 17:56 GMT

ಹೊಸದಿಲ್ಲಿ, ಡಿ.17: ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ಮಂಗಳವಾರ ಬಿಡುಗಡೆಯಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ(ಬಿಡಬ್ಲ್ಯುಎಫ್)ಪುರುಷರ ಸಿಂಗಲ್ಸ್ ಆಟಗಾರರ ರ‍್ಯಾಂಕಿಂಗ್ ನಲ್ಲಿ 9 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 32ನೇ ಸ್ಥಾನಕ್ಕೇರಿದ್ದಾರೆ.

ರವಿವಾರ ಬಾಂಗ್ಲಾದೇಶ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಪ್ರಶಸ್ತಿ ಜಯಿಸುವುದರೊಂದಿಗೆ ಲಕ್ಷ ಈ ಸಾಧನೆ ಮಾಡಿದ್ದಾರೆ. ಸೇನ್ ಈ ವರ್ಷದ ಆಡಿದ ಕಳೆದ 7 ಟೂರ್ನಮೆಂಟ್‌ಗಳಲ್ಲಿ ಐದನೇ ಬಾರಿ ಪ್ರಶಸ್ತಿ ಎತ್ತಿಹಿಡಿದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಢಾಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಲೇಶ್ಯದ ಲಿಯೊಂಗ್ ಜುನ್‌ಹಾವೊರನ್ನು 22-20, 21-18 ಗೇಮ್‌ಗಳ ಅಂತರದಿಂದ ಮಣಿಸಿದ 18ರ ಹರೆಯದ ಸೇನ್ ಪ್ರಶಸ್ತಿ ಎತ್ತಿಹಿಡಿದಿದ್ದರು.

ಲಕ್ಷ ಸೆಪ್ಟಂಬರ್‌ನಲ್ಲಿ ಬೆಲ್ಜಿಯಂ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ವರ್ಷದ ಮೊದಲ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಅಕ್ಟೋಬರ್‌ನಲ್ಲಿ ಡಚ್ ಓಪನ್ ಸೂಪರ್-100 ಹಾಗೂ ಸಾರ್ಲೊಲಕ್ಸ್ ಸೂಪರ್-100 ಪ್ರಶಸ್ತಿ ಜಯಿಸಿದ್ದರು. ನವೆಂಬರ್‌ನಲ್ಲಿ ಸ್ಕಾಟಿಶ್ ಓಪನ್ ಮುಕುಟ ತನ್ನದಾಗಿಸಿಕೊಂಡಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಹಾಗೂ ಕಿಡಂಬಿ ಶ್ರೀಕಾಂತ್ ಕ್ರಮವಾಗಿ 11ನೇ ಹಾಗೂ 12ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪಾರುಪಲ್ಲಿ ಕಶ್ಯಪ್ 23ನೇ ಸ್ಥಾನದಲ್ಲಿ ಮುಂದುವರಿದರೆ, ಎಚ್.ಎಸ್. ಪ್ರಣಯ್(26ನೇ), ಸೌರಭ್ ವರ್ಮಾ(28ನೇ),ಸಮೀರ್ ವರ್ಮಾ(33ನೇ) ಹಾಗೂ ಶುಭಾಂಕರ್ ಡೇ(44ನೇ)ತಮ್ಮ ಸ್ಥಾನದಲ್ಲೇ ಮುಂದುವರಿದ್ದಾರೆ.

ಪುರುಷರ ಡಬಲ್ಸ್ ರ‍್ಯಾಂಕಿಂಗ್ ನಲ್ಲಿ ಅಗ್ರ-10ರಲ್ಲಿ ಭಾರತದ ಯಾವ ಆಟಗಾರನೂ ಸ್ಥಾನ ಪಡೆದಿಲ್ಲ. ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಒಂದು ಸ್ಥಾನ ಮೇಲಕ್ಕೇರಿ 12ನೇ ಸ್ಥಾನ ತಲುಪಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ 33ನೇ ಸ್ಥಾನ ತಲುಪಿದ್ದಾರೆ. ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ 28ನೇ ಸ್ಥಾನದಲ್ಲಿದ್ದರೆ, ರಾನಿಕ್‌ರೆಡ್ಡಿ ಹಾಗೂ ಪೊನ್ನಪ್ಪ 36ನೇ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News