2020ರ ಆವೃತ್ತಿಯ ಐಪಿಎಲ್‌ಗೆ ಆಟಗಾರರ ಹರಾಜು: ಗಮನ ಸೆಳೆಯುತ್ತಿರುವ ಹೊಸ ಮುಖಗಳು

Update: 2019-12-17 18:10 GMT

ಹೊಸದಿಲ್ಲಿ, ಡಿ.17: 2020ರಲ್ಲಿ ನಡೆಯುವ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ಗೆ ಕೋಲ್ಕತಾ ನಗರದಲ್ಲಿ ಇದೇ ಮೊದಲ ಬಾರಿ ಗುರುವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹರಾಜಿನ ಕಣದಲ್ಲಿ ಭಾರತದ 186, ವಿದೇಶದ 146 ಆಟಗಾರರಲ್ಲದೆ, ಅಸೋಸಿಯೇಟ್ ದೇಶಗಳ 3 ಆಟಗಾರರಿದ್ದಾರೆ.

ವಿಶ್ವಶ್ರೇಷ್ಠ ಸ್ಫೋಟಕ ಬ್ಯಾಟ್ಸ್‌ಮನ್‌ಗಳು, ಉತ್ತಮ ಬೌಲರ್‌ಗಳು ಹಾಗೂ ಆಲ್‌ರೌಂಡರ್‌ಗಳಲ್ಲದೆ, ಹೊಸ ಆಟಗಾರರಿಗೂ 8 ತಂಡಗಳು ಬಿಡ್ ಸಲ್ಲಿಸಲು ಪೈಪೋಟಿ ನಡೆಸಲಿವೆ. ಕೆಲವು ಭಾರತೀಯ ಆಟಗಾರರ ಜೊತೆಗೆ ವಿದೇಶಿ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಎಲ್ಲ ತಂಡಗಳು ಪ್ರಯತ್ನ ನಡೆಸಲಿವೆ.

ಭಾರತದ ಮೂವರು ಹೊಸ ಆಟಗಾರರಾದ ಯಶಸ್ವಿ ಜೈಸ್ವಾಲ್, ಆರ್.ಸಾಯಿ ಕಿಶೋರ್ ಹಾಗೂ ಅಭಿಮನ್ಯು ಈಶ್ವರನ್ ಈ ಬಾರಿಯ ಐಪಿಎಲ್‌ನಲ್ಲಿ ಗಮನ ಸೆಳೆಯಲಿದ್ದಾರೆ.

ಯಶಸ್ವಿ ಜೈಸ್ವಾಲ್: 20 ಲಕ್ಷ ರೂ. ಮೂಲಬೆಲೆ

17ರ ಹರೆಯದ ಜೈಸ್ವಾಲ್ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಕಿರಿಯ ವಯಸ್ಸಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ಜಾರ್ಖಂಡ್ ವಿರುದ್ಧದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ 154 ಎಸೆತಗಳಲ್ಲಿ 17 ಬೌಂಡರಿ ಹಾಗೂ 12 ಸಿಕ್ಸರ್‌ಗಳ ಸಹಿತ 203 ರನ್ ಗಳಿಸಿದ್ದರು. ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 564 ರನ್ ಗಳಿಸಿದ್ದರು. ಇದರಲ್ಲಿ 3 ಶತಕ, 1 ಅರ್ಧಶತಕವಿದ್ದವು. ದಕ್ಷಿಣ ಆಫ್ರಿಕಾದಲ್ಲಿ ಜನವರಿ 17ರಿಂದ ಆರಂಭವಾಗಲಿರುವ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡದ ಸದಸ್ಯನಾಗಿದ್ದಾರೆ.

ಸಾಯಿಕಿಶೋರ್: 20 ಲಕ್ಷ ರೂ. ಮೂಲಬೆಲೆ

ದೇಶದ ನೀಳಕಾಯದ ಸ್ಪಿನ್ನರ್‌ಗಳ ಪೈಕಿ ಒಬ್ಬರಾಗಿರುವ ಸಾಯಿಕಿಶೋರ್ ಆರಡಿ, 3 ಇಂಚು ಎತ್ತರ ಇದ್ದಾರೆ. ಎಡಗೈ ಸ್ಪಿನ್ನರ್ ವಿವಿಧ ಶೈಲಿಯ ಬೌಲಿಂಗ್‌ನ ಮೂಲಕ ಎದುರಾಳಿಯ ದಾಂಡಿಗರನ್ನು ನಿದ್ದೆಗೆಡಿಸಬಲ್ಲರು. ತಮಿಳುನಾಡಿನ 23ರ ವಯಸ್ಸಿನ ಕಿಶೋರ್ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಪಡೆದು ಸರ್ವಶ್ರೇಷ್ಠ ಸಾಧನೆ ಮಾಡಿದ್ದರು. ಇವರ ಮೂಲ ಬೆಲೆ 20 ಲಕ್ಷ ರೂ. ತಂಡಗಳು ಪ್ರತಿಭಾವಂತ ಭಾರತೀಯ ಸ್ಪಿನ್ನರ್‌ಗಳತ್ತ ಚಿತ್ತವಿರಿಸಿರುವ ಹಿನ್ನೆಲೆಯಲ್ಲಿ ಎಡಗೈ ಸ್ಪಿನ್ನರ್ ಹರಾಜಾಗಬಲ್ಲ ಫೇವರಿಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಈಶ್ವರನ್: 20 ಲಕ್ಷ ರೂ. ಮೂಲಬೆಲೆ

ಅಗ್ರ ಸರದಿಯ ಬ್ಯಾಟ್ಸ್ ಮನ್ ಅಭಿಮನ್ಯು ಈಶ್ವರನ್ ಯಾವುದೇ ಮಾದರಿ ಕ್ರಿಕೆಟ್‌ಗೆ ಒಪ್ಪುವಂತಹ ಆಟಗಾರನಾಗಿದ್ದು, 2019-20ರ ಋತುವಿನಲ್ಲಿ ಬಂಗಾಳ ಕ್ರಿಕೆಟ್ ತಂಡದ ನಾಯಕನ ಹೊಣೆಹೊತ್ತಿದ್ದಾರೆ. ಈಶ್ವರನ್ ಈ ವರ್ಷ ಶ್ರೀಲಂಕಾ ‘ಎ’ ವಿರುದ್ಧ 233 ರನ್ ಗಳಿಸಿ ಭಾರತ ‘ಎ’ ತಂಡಕ್ಕೆ 205 ರನ್‌ಗಳ ಗೆಲುವು ತಂದುಕೊಟ್ಟಿದ್ದರು. ಡೆಹ್ರಾಡೂನ್‌ನಲ್ಲಿ ಜನಿಸಿರುವ ಈಶ್ವರನ್ 11ನೇ ವಯಸ್ಸಿನಲ್ಲಿ ಕೋಲ್ಕತಾಕ್ಕೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದರು. 23ರ ಹರೆಯದ ಈಶ್ವರನ್ ಭಾರತದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್, ಸೌರವ್ ಗಂಗುಲಿ ಅವರಿಂದ ಬ್ಯಾಟಿಂಗ್ ಸಲಹೆ ಪಡೆದಿದ್ದಾರೆ. ಭಾರತ ಎ ತಂಡವನ್ನು ಪ್ರತಿನಿಧಿಸಿರುವ ಈಶ್ವರನ್ ನ್ಯೂಝಿಲ್ಯಾಂಡ್ ಎ, ಶ್ರೀಲಂಕಾ ಎ ಹಾಗೂ ವೆಸ್ಟ್‌ಇಂಡೀಸ್ ಎ ತಂಡದ ವಿರುದ್ಧ ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News