ಗೊಂದಲ ಸೃಷ್ಟಿಸುವ ಸಿಎಎ, ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡೆವು: ಯು.ಟಿ. ಖಾದರ್

Update: 2019-12-18 14:24 GMT

ಮಂಗಳೂರು, ಡಿ.18: ಈಗಾಗಲೇ ಉತ್ತರ ಭಾರತದಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶ, ಗೊಂದಲಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ಜಾರಿಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಈಗಾಗಲೇ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಯನ್ನು ವಿರೋಧಿಸಿ ಸಂಘರ್ಷಕ್ಕೆ ಕಾರಣವಾಗಿದೆ. ಇಂತಹ ಗೊಂದಲಮಯ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಾಗಿ ಹೇಳುವ ಗೃಹ ಸಚಿವರು ಹೇಳುವ ಮೂಲಕ ರಾಜ್ಯದ ಜನತೆಯಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಇದು ಚುನಾವಣಾ ರಾಜಕೀಯವಾಗಿದ್ದು, ಅದರ ಹಿಂದೆ ಗುಪ್ತ ಅಜೆಂಡಾವಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಶಾಂತವಾಗಿದ್ದ ಉತ್ತರ ಭಾರತದಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಅಂಶ ಸೇರಿಸಿ ನಾಗರಿಕರ ಯುದ್ಧದ ವಾತಾವರಣ ಸೃಷ್ಟಿಸಿದೆ. ಈ ಹಿಂದೆ ನಡೆಯುತ್ತಿದ್ದ ಗೆರಿಲ್ಲಾ ಹೋರಾಟವನ್ನು ಕಾಂಗ್ರೆಸ್ ಪಕ್ಷ 60 ವರ್ಷಗಳಲ್ಲಿ ಸರಿದಾರಿಗೆ ತಂದಿದೆ. ಆ ವ್ಯವಸ್ಥೆಯನ್ನು ಕಳೆದ ಆರು ವರ್ಷಗಳ ಆಡಳಿತದಲ್ಲಿ ಬಿಜೆಪಿ ಹಾಳುಗೆಡವಿದೆ. ದೇಶದ ಭದ್ರತೆ ಬಗ್ಗೆ ಭಾರತೀಯರೆಲ್ಲರಿಗೂ ಜವಾಬ್ಧಾರಿ ಇದೆ. ಆಸಕ್ತಿಯೂ ಇದೆ. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಆದರೆ ಸ್ಪಷ್ಟತೆಯೇ ಇಲ್ಲದ ಕಾನೂನನ್ನು ಜಾರಿಗೊಳಿಸುತ್ತಿರುವುದು ಆತಂಕಕಾರಿ. ಎನ್‌ಆರ್‌ಸಿ ಜಾರಿ ಬಗ್ಗೆ ಜನತೆಗೆ ಯಾವುದೇ ರೀತಿಯ ತಕರಾರಿಲ್ಲ. ಬದಲಾಗಿ ಅದರ ಹಿಂದಿರುವ ಹಿಡೆನ್ ಅಜೆಂಡಾವನ್ನು ವಿರೋಧಿಸುತ್ತಿರುವುದು. ಈ ಕಾನೂನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಆದ್ದರಿಂದಲೇ ತ್ರಿಪುರಾದಲ್ಲಿ ಗಲಾಟೆ ನಡೆಯುತ್ತಿದೆ. ಅಸ್ಸಾಂನಲ್ಲಿ ಬಿಜೆಪಿಯ ಸಹ ಪಕ್ಷವೇ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಇದು ಜನಸಾಮಾನ್ಯರಿಗೆ ವಿರೋಧವಾದದು ಎಂದು ಅವರು ಹೇಳಿದರು.

ಅಕ್ರಮ ವಲಸಿಗರನ್ನು ನಿಯಂತ್ರಿಸಲು ಈ ಕಾಯ್ದೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ತಾನಕ್ಕೆ ರೈಲು ಟ್ರಾಕ್ ಆರಂಭಿಸಿದ್ದೇಕೆ? ಅಲ್ಲಿಗೆ ಬಸ್ಸು ಸಂಚಾರ ಆರಂಭಿಸಿದ್ದು ಯಾರು? ಕಾರಿಡಾರ್ ತೆರೆದಿದ್ದು ಯಾರು? ಅಲ್ಲಿಗೆ ಹೋಗಿ ಊಟ ಮಾಡಿ ಬರುವುದು ಯಾರು? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಆದರೆ, ಜನರನ್ನು ಭಯದ ವಾತಾವರಣದಲ್ಲಿರುವ ಈ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

ಗೋಷ್ಠಿಯಲ್ಲಿ ಸಂತೋಷ್ ಕುಮಾರ್, ಈಶ್ವರ ಉಳ್ಳಾಲ್, ಮುಹಮ್ಮದ್ ಮೋನು, ಎನ್.ಎಸ್. ಕರೀಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News