36 ವರ್ಷಗಳ ಬಳಿಕ ಮತ್ತೆ ವಕೀಲರಾಗಿ ಕೋರ್ಟ್‌ಗೆ ಮರಳಿದ ತರುಣ್ ಗೊಗೊಯಿ
Update: 2019-12-18 20:31 IST
ಹೊಸದಿಲ್ಲಿ,ಡಿ.18: ಮೂರು ಬಾರಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಅವರು ಬುಧವಾರ 36 ವರ್ಷಗಳ ಬಳಿಕ ವಕೀಲರಾಗಿ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು.
ವೃತ್ತಿಯಲ್ಲಿ ವಕೀಲರಾಗಿರುವ ಗೊಗೊಯಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ ವಕೀಲ ಪಿ.ಚಿದಂಬರಂ ಅವರಿಗೆ ನೆರವಾಗಲು ಉಪಸ್ಥಿತರಿದ್ದರು. ಗೊಗೊಯಿ ಕೊನೆಯ ಬಾರಿ 1983ರಲ್ಲಿ ಪ್ರಕರಣವೊಂದಲ್ಲಿ ವಾದಿಸಿದ್ದರು.
ಪೌರತ್ವ ಕಾಯ್ದೆಯನ್ನು ವಿರೋಧಿಸಿದ್ದ ಗೊಗೊಯಿ ಅದು ತಾರತಮ್ಯದಿಂದ ಕೂಡಿದೆ ಎಂದು ಬಣ್ಣಿಸಿದ್ದರು. ಈ ವರ್ಷದ ಅಕ್ಟೋಬರ್‌ನಲ್ಲಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಸ್ಸಾಮಿನಲ್ಲಿ ಎನ್‌ಆರ್‌ಸಿಯನ್ನು ಸಮರ್ಥಿಸಿದ್ದ ಅವರು,ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪರಸ್ಪರ ವಿರುದ್ಧವಾಗಿವೆ ಎಂದು ಹೇಳಿದ್ದರು.