ಅಮೆಝಾನ್ ಬುಡಕಟ್ಟು ಪ್ರದೇಶಗಳಲ್ಲಿ 11 ವರ್ಷಗಳಲ್ಲೇ ಅಧಿಕ ಅರಣ್ಯ ನಾಶ
ಬ್ರೆಸೀಲಿಯ (ಬ್ರೆಝಿಲ್), ಡಿ. 18: ಅಮೆಝಾನ್ ದಟ್ಟಾರಣ್ಯದಲ್ಲಿರುವ ಸಂರಕ್ಷಿತ ಬುಡಕಟ್ಟು ಪ್ರದೇಶಗಳಲ್ಲಿ ಆಗಿರುವ ಮರಗಳ ಕಡಿತವು ಒಟ್ಟು ಅರಣ್ಯದಲ್ಲಿ ಆಗಿರುವ ಅರಣ್ಯ ನಾಶಕ್ಕಿಂತ ಮೂರು ಪಟ್ಟು ಅಧಿಕವಾಗಿದೆ ಹಾಗೂ 2008ರ ಬಳಿಕ ಗರಿಷ್ಠವಾಗಿದೆ ಎಂದು ಉಪಗ್ರಹ ಚಿತ್ರಾಧಾರಿತ ನೂತನ ಅಧ್ಯಯನವೊಂದು ತಿಳಿಸಿದೆ.
2018 ಆಗಸ್ಟ್ ಮತ್ತು 2019 ಜುಲೈ ನಡುವಿನ ಅವಧಿಯಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿ ಆಗಿರುವ ಅರಣ್ಯ ನಾಶವು 42,600 ಹೆಕ್ಟೇರ್ ಆಗಿದೆ ಎಂದು ಬುಡಕಟ್ಟು ಜನರ ಪರವಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆ (ಎನ್‌ಜಿಒ) ಐಎಸ್‌ಎ ತಿಳಿಸಿದೆ. ಅದು ಈ ಸಂಬಂಧ ಬ್ರೆಝಿಲ್‌ನ ಬಾಹ್ಯಾಕಾಶ ಸಂಸ್ಥೆ ಐಎನ್‌ಪಿಇ ಒದಗಿಸಿರುವ ಅಂಕಿ-ಅಂಶಗಳ ಅಧ್ಯಯನ ಮಾಡಿದೆ.
ಸಂರಕ್ಷಿತ ಬುಡಕಟ್ಟು ಪ್ರದೇಶಗಳಲ್ಲಿ ಅರಣ್ಯ ನಾಶದಲ್ಲಿ ಮುಖ್ಯವಾಗಿ ತೊಡಗಿಕೊಂಡವರು ಭೂಅತಿಕ್ರಮಣಕಾರರು, ಅಕ್ರಮ ಮರ ಕಡಿಯುವವರು ಮತ್ತು ಅಕ್ರಮ ಗಣಿಗಾರಿಕೆ ಮಾಡುವವರು. ಈ ಪ್ರದೇಶಗಳಲ್ಲಿ ಮರಗಳನ್ನು ಕಡಿಯುವುದನ್ನು ಕಾನೂನು ಮೂಲಕ ನಿಷೇಧಿಸಲಾಗಿದೆ.
ಬುಡಕಟ್ಟು ಜಮೀನುಗಳ ಮೇಲೆ ಹೆಚ್ಚಿನ ಅತಿಕ್ರಮಣ
ಕಳೆದ ವರ್ಷದಿಂದ ಬುಡಕಟ್ಟು ಜಮೀನುಗಳ ಮೇಲಿನ ಅತಿಕ್ರಮಣದಲ್ಲಿ ಹೆಚ್ಚಳವಾಗಿದೆ. ಈ ಜಮೀನನ್ನು ಆಕಳುಗಳ ಹುಲ್ಲುಗಾವಲನ್ನಾಗಿ ಮಾಡುವುದಕ್ಕಾಗಿ ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಕೊಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬ್ರೆಝಿಲ್ ಅಧ್ಯಕ್ಷರಾಗಿರುವ ಬಲಪಂಥೀಯ ಒಲವಿನ ಜೈರ್ ಬೊಲ್ಸೊನಾರೊ, ತನ್ನ ಮತದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಅರಣ್ಯ ನಾಶಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.