ಸಿರಿಯ: ಸರಕಾರಿ ಪಡೆಗಳ ದಾಳಿಯಲ್ಲಿ 14 ನಾಗರಿಕರ ಸಾವು

Update: 2019-12-18 15:24 GMT

ಬೈರೂತ್, ಡಿ. 18: ಪ್ರತಿಪಕ್ಷದ ಕೊನೆಯ ಪ್ರಮುಖ ನೆಲೆ ಇದ್ಲಿಬ್‌ನ ಮೇಲೆ ಸಿರಿಯದ ಸರಕಾರಿ ಪಡೆಗಳು ಮಂಗಳವಾರ ನಡೆಸಿದ ವಾಯು ಮತ್ತು ಫಿರಂಗಿ ದಾಳಿಗಳಲ್ಲಿ 14 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಬಂಡುಕೋರರ ನಿಯಂತ್ರಣದಲ್ಲಿರುವ ವಲಯದಲ್ಲಿ ಹಲವು ತಿಂಗಳುಗಳಿಂದ ಯುದ್ಧವಿರಾಮ ಜಾರಿಯಲ್ಲಿದೆ. ಹಾಗಾಗಿ, ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲು ಸರಕಾರಿ ಪಡೆಗಳಿಗೆ ಸಾಧ್ಯವಾಗಿಲ್ಲ. ಆದರೆ, ಈಗ ಭೀಕರ ಬಾಂಬ್ ದಾಳಿ ನಡೆಯುತ್ತಿದೆ.

ಫಿರಂಗಿ ದಾಳಿಯಲ್ಲಿ ಒಂದೇ ನಾಗರಿಕ ಕುಟುಂಬದ ಆರು ಸದಸ್ಯರು ಮೃತಪಟ್ಟಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ. ಅದೇ ವೇಳೆ, ಇತರ ಕಡೆಗಳಲ್ಲಿ ಸರಕಾರಿ ಯುದ್ಧ ವಿಮಾನಗಳ ದಾಳಿಯಲ್ಲಿ 8 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸರಕಾರ ಪರ ಪಡೆಗಳು ಎಪ್ರಿಲ್‌ನಲ್ಲಿ ಇದ್ಲಿಬ್ ಮೇಲೆ ನಡೆಸಿದ ಭೀಕರ ದಾಳಿಗಳಲ್ಲಿ ಸುಮಾರು 1,000 ಮಂದಿ ಮೃತಪಟ್ಟಿದ್ದಾರೆ ಹಾಗೂ 4 ಲಕ್ಷಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಆಗಸ್ಟ್ ಕೊನೆಯ ವೇಳೆಗೆ ರಶ್ಯವು ಅಲ್ಲಿ ಯುದ್ಧವಿರಾಮವೊಂದನ್ನು ಘೋಷಿಸಿತು. ಆದರೆ, ಭೀಕರ ಬಾಂಬ್ ದಾಳಿಗಳು ಮತ್ತು ಘರ್ಷಣೆಗಳು ನಡೆಯುತ್ತಲೇ ಬಂದಿವೆ ಎಂದು ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News