ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಅನುಮತಿಯನ್ನು ತಡೆಹಿಡಿದ ಕೇಂದ್ರ
ಬೆಂಗಳೂರು,ಡಿ.18: ಕಳಸಾ-ಬಂಡೂರಿ ಯೋಜನೆ ಕೈಗೊಳ್ಳಲು ಕರ್ನಾಟಕಕ್ಕೆ ನೀಡಿದ್ದ ಅನುಮತಿಯನ್ನು ತಡೆಹಿಡಿದಿರುವುದಾಗಿ ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಬುಧವಾರ ತಿಳಿಸಿದೆ.
ಅನುಮತಿ ನೀಡಿದ ಬಳಿಕ ಲಭ್ಯವಾದ ಮಾಹಿತಿಗಳು 2018,ಆ.14ರಂದು ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪಿನ ಕುರಿತು ಗೋವಾ ಮತ್ತು ಕರ್ನಾಟಕ ಸರಕಾರ ಸಲ್ಲಿಸಿರುವ ವ್ಯಾಜ್ಯಗಳು ಇನ್ನೂ ಬಾಕಿಯಿವೆ ಎನ್ನುವುದನ್ನು ಬೆಟ್ಟು ಮಾಡಿವೆ. ಅಲ್ಲದೆ ತೀರ್ಪನ್ನು ಮಹಾರಾಷ್ಟ್ರ ಸೇರಿದಂತೆ ಎಲ್ಲ ಮೂರೂ ಫಲಾನುಭವಿ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿವೆ ಎಂದು ಸಚಿವಾಲಯವು ವಿವರಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಈ ಎಲ್ಲ ಪ್ರಕರಣಗಳು ಬಾಕಿಯಿರುವ ಹಿನ್ನೆಲೆಯಲ್ಲ್ಲಿ ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಅನುಮತಿಯನ್ನು ತಡೆಹಿಡಿಯಲಾಗಿದೆ ಎಂದು ಸಚಿವಾಲಯವು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಕಳಸಾ-ಬಂಡೂರಿ ಯೋಜನೆಗೆ ಪರಿಸರಾತ್ಮಕ ಅನುಮತಿಯನ್ನು ನೀಡಿದ್ದನ್ನು ವಿರೋಧಿಸಿ ಗೋವಾ ಕಾಂಗ್ರೆಸ್ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಎರಡು ದಿನಗಳ ಬಳಿಕ ಕೇಂದ್ರದ ಈ ಆದೇಶ ಹೊರಬಿದ್ದಿದೆ.
ಯೋಜನೆಯು ಧಾರವಾಡ,ಬೆಳಗಾವಿ,ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ 13 ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸಲು ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಹಾದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಉದ್ದೇಶವನ್ನು ಹೊಂದಿದೆ.
ಅನುಮತಿಯನ್ನು ತಡೆಹಿಡಿದಿರುವುದು ಏಕೆ,ಅದನ್ನೇಕೆ ಹಿಂದೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ ಗೋವಾ ಕಾಂಗ್ರೆಸ್‌ನ ಮಾಧ್ಯಮ ಸಂಚಾಲಕ ಟ್ರಜನೋ ಡಿ’ಮೆಲ್ಲೊ ಅವರು,ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಕರ್ನಾಟಕದಲ್ಲಿ ಉಪಚುನಾವಣೆಗಳಿಗೆ ಮುನ್ನ ಕೇಂದ್ರ ಸರಕಾರವು ಯೋಜನೆಗೆ ಅನುಮತಿ ನೀಡಿತ್ತು. 2022ರಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆೆಗೆ ಮುನ್ನ ಗೋವಾದ ಪರವಾಗಿ ಅದು ಪ್ರಕಟಣೆಯನ್ನು ಹೊರಡಿಸಬಹುದು ಎಂದರು.