ಬಂಧನದಿಂದ ಗೌರವ ಪ್ರಾಪ್ತಿ: ಯೋಗೇಂದ್ರ ಯಾದವ್

Update: 2019-12-19 16:20 GMT

ಹೊಸದಿಲ್ಲಿ, ಡಿ.19: ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಬಂಧನಕ್ಕೊಳಗಾದವರಲ್ಲಿ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಕೂಡಾ ಸೇರಿದ್ದು, ಇದು ತನಗೆ ಸಿಕ್ಕಿದ ಗೌರವವಾಗಿದೆ ಎಂದು ಹೇಳಿದ್ದಾರೆ.

 ಡಿಸೆಂಬರ್ 19ರಂದು ಬಂಧನಕ್ಕೊಳಗಾಗುವ ಮೂಲಕ ಗೌರವಕ್ಕೆ ಪಾತ್ರನಾಗಿದ್ದೇನೆ. ಇದು ಅಶ್ಫಾಕುಲ್ಲಾ ಖಾನ್ ಮತ್ತು ರಾಮಪ್ರಸಾದ್ ಬಿಸ್ಮಿಲ್‌ಗೆ ಸಲ್ಲಿಸುವ ಚಿಕ್ಕದೊಂದು ಶ್ರದ್ಧಾಂಜಲಿಯಾಗಿದೆ. ಪಟಿಯಾಲದ ಮಾಜೊ ಸಂಸದ ಡಾ ಧರ್ಮವೀರ್ ಗಾಂಧಿಯ ಜತೆ ಇರುವುದಕ್ಕೆ ಖುಷಿಯಾಗುತ್ತಿದೆ ಎಂದವರು ಟ್ವೀಟ್ ಮಾಡಿದ್ದಾರೆ.

 ತಮ್ಮನ್ನು ಬಹುಷಃ ಭಾವನಾ ನಗರಕ್ಕೆ ಕರೆದೊಯ್ಯಲಾಗುತ್ತಿದೆ. ವಿದ್ಯಾರ್ಥಿಗಳ ತಂಡ, ಕಾರ್ಯಕರ್ತರು, ಸಾಹಿತಿಗಳು ಹೀಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಬಂಧಿಸಲಾಗುತ್ತಿದೆ. ಈಗ ಬಂಧಿತರನ್ನು ಸಾಗಿಸಲು ಬಸ್‌ಗಳ ಕೊರತೆಯಿದ್ದು ಇನ್ನಷ್ಟು ಬಸ್ಸುಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಡಿ ರಾಜಾ, ಸೀತಾರಾಮ ಯೆಚೂರಿ, ನೀಲೋತ್ಪಲ ಬಸು, ಬೃಂದಾ ಕಾರಟ್ ಸಹಿತ ಎಡಪಕ್ಷದ ಹಲವು ಮುಖಂಡರನ್ನು ಮಂಡಿ ಹೌಸ್‌ನಲ್ಲಿ ನಡೆದ ಮತ್ತೊಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಹಲವೆಡೆ ಟ್ರಾಫಿಕ್ ಜಾಮ್ ಆಗಿದ್ದು ಸಂಚಾರ ವ್ಯವಸ್ಥೆಗೆ ತೊಡಕಾಗಿದೆ. ಕೆಂಪುಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು ಜನರು ಅಧಿಕ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News