ಕಮಲ ಅರಳುವುದು ಕೆಸರಿನಲ್ಲೇ: ಬಿಜೆಪಿ ವಿರುದ್ಧ ಆದಿತ್ಯ ಠಾಕ್ರೆ ವಾಗ್ದಾಳಿ

Update: 2019-12-19 16:59 GMT

ಮುಂಬೈ, ಡಿ.19: ಕಮಲ ಅರಳುವುದು ಕೆಸರಿನಲ್ಲೇ ಎಂಬುದು ಎಲ್ಲರಿಗೂ ತಿಳಿದಿದೆ. ಅಂತೆಯೇ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಪ್ರಥಮ ದಿನದಿಂದಲೇ ವಿರೋಧ ಪಕ್ಷವು ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸಿದೆ. ರಾಜಕೀಯದಲ್ಲಿ ರಾಡಿ ಎಬ್ಬಿಸಿ ಅದರ ಪ್ರಯೋಜನ ಪಡೆಯಲು ವಿರೋಧ ಪಕ್ಷ ವಿಫಲ ಪ್ರಯತ್ನ ನಡೆಸಿದೆ ಎಂದು ಶಿವಸೇನೆಯ ಯುವನಾಯಕ ಆದಿತ್ಯ ಠಾಕ್ರೆ ಬಿಜೆಪಿ  ವಿರುದ್ಧ ಕಿಡಿ ಕಾರಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಆದಿತ್ಯ ಠಾಕ್ರೆ ವಿಧಾನಸಭೆಯಲ್ಲಿ ಬುಧವಾರ 11 ನಿಮಿಷ ಮಾತನಾಡಿದರು. ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಸುಮಾರು 1 ತಿಂಗಳು ಬಿಜೆಪಿ ನಾಟಕ ಮಾಡಿತ್ತು. ಆದರೆ ಅಂತಿಮವಾಗಿ ಶರದ್ ಪವಾರ್ ಸಾಹೇಬರು ಹಾಗೂ ಸೋನಿಯಾ ಗಾಂಧಿಯವರ ನಿರ್ಧಾರದಂತೆ ಬಾಳಾಸಾಹೇಬ್ ಠಾಕ್ರೆಯವರ ಮಗ ಮುಖ್ಯಮಂತ್ರಿಯಾಗಿರುವ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇದು ಮಹಾರಾಷ್ಟ್ರದ ಶಕ್ತಿಯ ಪ್ರತೀಕವಾಗಿದೆ ಎಂದು ಠಾಕ್ರೆ ಹೇಳಿದರು.

ರೈತರನ್ನು ಋಣ ಮುಕ್ತಗೊಳಿಸಬೇಕಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಉದ್ಯೋಗ ಸೃಷ್ಟಿಸುವ ಬಗ್ಗೆ ಯೋಜನೆ ರೂಪಿಸಬೇಕಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿ ತರಾತುರಿ ಅನುಷ್ಟಾನದಿಂದ ಉದ್ಯಮಗಳು ಹಾಗೂ ರೈತರಿಗೆ ತೊಂದರೆಯಾಗಿದೆ. ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟವಾದ ‘ಮಹಾರಾಷ್ಟ್ರ ವಿಕಾಸ ಅಘಾದಿ(ಎಂವಿಎ) ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಿದ್ದು ಮುಂಬರುವ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಟಿಬದ್ಧವಾಗಿದೆ ಎಂದವರು ಹೇಳಿದರು.

ಪ್ರಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಎನ್‌ಸಿಪಿಯ ರೋಹಿತ್ ಪವಾರ್ ಮಾತನಾಡಿ, ಬಾಳಾಸಾಹೇಬ್ ಠಾಕ್ರೆಯವರ ಬಗ್ಗೆ ನಮಗೂ ಗೌರವವಿದೆ. ಇಲ್ಲಿರುವ ಶಿವಸೇನೆಯ ಎಲ್ಲಾ ಶಾಸಕರೂ ಬಾಳಾಸಾಹೇಬ್ ಠಾಕ್ರೆಯವರ ಪರಂಪರೆಯನ್ನು ಗೌರವಿಸುವವರಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News