ಪಾಕ್‌ನ ಹಿಂದೂಗಳಿಗೆ ಪೌರತ್ವ ಲಭ್ಯವಾದರೆ ಶ್ರೀಲಂಕಾದ ಹಿಂದೂಗಳಿಗೆ ಯಾಕಿಲ್ಲ: ಕಮಲ್ ಹಾಸನ್

Update: 2019-12-19 17:02 GMT

ಚೆನ್ನೈ, ಡಿ.19: ಪಾಕಿಸ್ತಾನದಿಂದ ಬರುವ ಹಿಂದೂಗಳಿಗೆ ಪೌರತ್ವ ಲಭಿಸುವುದಾದರೆ ಶ್ರೀಲಂಕಾದ ತಮಿಳಿಯನ್ನರಿಗೆ ಮತ್ತು ಅಲ್ಲಿಂದ ಬರುವ ತಮಿಳು ನಿರಾಶ್ರಿತರಿಗೆ ಪೌರತ್ವ ಯಾಕೆ ಲಭ್ಯವಾಗುವುದಿಲ್ಲ ಎಂದು ತಮಿಳು ಚಿತ್ರನಟ, ಮಕ್ಕಳ ನೀಧಿ ಮೈಯಮ್(ಎಂಎನ್‌ಎಂ) ಪಕ್ಷದ ಅಧ್ಯಕ್ಷ ಕಮಲಹಾಸನ್ ಪ್ರಶ್ನಿಸಿದ್ದಾರೆ.

ಚೆನ್ನೈಯ ಅಲ್ವಾರ್‌ಪೇಟೆಯಲ್ಲಿರುವ ಎಂಎನ್‌ಎಂ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಳ್ಳಿಗಳೇ ಭಾರತದ ಬೆನ್ನೆಲುಬಾಗಿದೆ ಮತ್ತು ನಮ್ಮ ರೈತರು ಸಾಯುತ್ತಿದ್ದಾರೆ. ಆರ್ಥಿಕ ಪ್ರಗತಿ ಮಂದಗತಿಯಲ್ಲಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ಈ ಬಗ್ಗೆ ಗಮನ ಹರಿಸದ ಸರಕಾರ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಇದು ರಾಷ್ಟ್ರವಿರೋಧಿ ಶಕ್ತಿಗಳ ಅಂತ್ಯದ ಆರಂಭವಾಗಿದೆ ಎಂದು ಹೇಳಿದರು. (ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ, ಯಾವುದೇ ರಾಜಕೀಯ ಪಕ್ಷವನ್ನು ಉದ್ದೇಶಿಸಿ ಈ ಹೇಳಿಕೆ ನೀಡಿಲ್ಲ. ಎಲ್ಲಾ ರಾಷ್ಟ್ರವಿರೋಧಿ ಶಕ್ತಿಗಳನ್ನು ಉದ್ದೇಶಿಸಿ ನೀಡಿದ್ದಾಗಿದೆ ಎಂದರು.).

 ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯ ಪರವಾಗಿ ಮತ ಹಾಕಿದ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷವನ್ನು ಟೀಕಿಸಿದ ಅವರು, ಇದು ತಮಿಳು ಜನತೆ ಹಾಗೂ ಭಾರತಕ್ಕೆ ಮಾಡಿದ ದ್ರೋಹವಾಗಿದೆ. ರಾಜ್ಯ ಸರಕಾರ ತನ್ನ ಒಡೆಯನಿಗೆ ವಿಧೇಯನಾಗಿ ನಡೆದುಕೊಳ್ಳುತ್ತಿದೆ. ಒಡೆಯ ಯಾರೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದರು. ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ , ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸಿದ ಕಾರ್ಯಾಚರಣೆಯ ಬಳಿಕ ನಡೆದ ಹಿಂಸಾಚಾರ ಘಟನೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುವಜನತೆ ರಾಜಕೀಯದ ಬಗ್ಗೆ ಅರಿವು ಹೊಂದಿರಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆಗಳನ್ನು ಹತ್ತಿಕ್ಕಿದಾಗ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂದರು.

 ಪೌರತ್ವ ಕಾಯ್ದೆಯ ಬಗ್ಗೆ ಸಿನೆಮ ಕ್ಷೇತ್ರದ ಹಲವು ಪ್ರಮುಖರು ಚಕಾರವೆತ್ತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಲವು ಧ್ವನಿಗಳನ್ನು ಹತ್ತಿಕ್ಕಲಾಗಿದೆ ಮತ್ತು ಭಯ ಹುಟ್ಟಿಸಲಾಗಿದೆ ಎಂದರು. ಪೌರತ್ವ ಕಾಯ್ದೆ ವಿರೋಧಿಸಿ ತಮ್ಮ ಪಕ್ಷ ಸರಿಯಾದ ರೀತಿಯಲ್ಲಿ ಪ್ರತಿಭಟನೆ ನಡೆಸಿ ಕಾನೂನು ಪರಿಹಾರ ಹುಡುಕಲು ಪ್ರಯತ್ನಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News