ಪ್ರತಿಭಟನನಿರತ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರ ದೌರ್ಜನ್ಯ: ಆರೋಪ

Update: 2019-12-19 17:17 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಮೂವರು ಎಬಿವಿಪಿ ಪದಾಧಿಕಾರಿಗಳು ಬೆದರಿಕೆಯೊಡ್ಡಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಬಿವಿಪಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಒಂದು ನಿಮಿಷ 27 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಎಬಿವಿಪಿಯ ಶಾಹದರ ಜಿಲ್ಲಾ ಸಂಚಾಲಕ ಜಿತೇಂದರ್ ಚೌಧರಿ ಅವರು ಕೇರಳದ ವಿದ್ಯಾರ್ಥಿಯೊಬ್ಬನಿಗೆ ಕಿರುಕುಳ ನೀಡುತ್ತಿರುವುದು ಕಾಣಿಸುತ್ತದೆ. "ನೀನು ಸಿಎಎಯನ್ನು ಬೆಂಬಲಿಸುತ್ತೀಯಾ ಅಥವಾ ಇಲ್ಲವೇ ? ನೀನು ಅದರ ಪರ ಅಥವಾ ವಿರೋಧಿಯೇ ?'' ಎಂದು ಕೇಳುತ್ತಿರುವುದು ಹಾಗೂ ವಿದ್ಯಾರ್ಥಿ ತಾನು ಅದನ್ನು ವಿರೋಧಿಸುವುದಾಗಿ ಹೇಳುವುದು ಕೇಳಿಸುತ್ತದೆ. ಆತನನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಆಗ ಇನ್ನೊಬ್ಬ ವ್ಯಕ್ತಿ ವೀಡಿಯೋದಲ್ಲಿ ಕಾಣಿಸದೇ ಇರುವ ವ್ಯಕ್ತಿಗೆ ಹೇಳುತ್ತಾನೆ.

ಇನ್ನೊಂದು ಹತ್ತು ಸೆಕೆಂಡ್ ಅವಧಿಯ ವಿಡಿಯೋದಲ್ಲಿ ವಿವಿಯ ಸಮಾಜ ವಿಜ್ಞಾನ ವಿಭಾಗದ ಹೊರಗಡೆ ವಿದ್ಯಾರ್ಥಿಯೊಬ್ಬನನ್ನು ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಭರತ್ ಶರ್ಮ ತುಳಿಯುತ್ತಿರುವುದು ಕಾಣಿಸುತ್ತದೆ. ವಿವಿಯ ರಾಜ್ಯಶಾಸ್ತ್ರ ಎಂಎ ವಿದ್ಯಾರ್ಥಿಗಳು ಪ್ರತಿಭಟನೆಗೆ ಕರೆ ನೀಡಿದ ಸಂದರ್ಭಧ  ವೀಡಿಯೋ ಇದಾಗಿದೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ತಾನೇ ಎಂದು ಒಪ್ಪಿಕೊಂಡಿರುವ ಶರ್ಮ ಅದೇ ಸಮಯ ಈ ಘಟನೆ ನಡೆಯುವ ಮುನ್ನ ಕೆಲ ಎಡಪಂಥಿಯ ಗೂಂಡಾಗಳು ಎಬಿವಿಪಿ ಮಹಿಳಾ ಕಾರ್ಯಕರ್ತೆಯರ ಜತೆ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಇಪ್ಪತ್ತು ಸೆಕೆಂಡ್ ಅವಧಿಯ ಮೂರನೇ ವೀಡಿಯೋದಲ್ಲಿ  ಕಲಾ ವಿಭಾಗದ ವಿದ್ಯಾರ್ಥಿಯೊಬ್ಬನನ್ನು ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಅಕ್ಷಿತ್ ದಹಿಯಾ ಸಹಿತ ಕೆಲವರು ಎಳೆದಾಡುತ್ತಿರುವುದು  ಕಾಣಿಸುತ್ತದೆ. ವಿದ್ಯಾರ್ಥಿಯ ಗುರುತುಪತ್ರವನ್ನೂ ಅವರು ಕೇಳುತ್ತಿರುವುದು ಹಾಗೂ ಕೂದಲು ಹಿಡಿದೆಳೆದು ಕಪಾಳಮೋಕ್ಷಗೈಯ್ಯುತ್ತಿರುವುದೂ ಕಾಣಿಸುತ್ತದೆ.

ಈ ವೀಡಿಯೋ ಕುರಿತು ಪ್ರತಕ್ರಿಯಿಸಿದ ದಹಿಯಾ, ತಾನು ವಿದ್ಯಾರ್ಥಿ ಮೇಲೆ ನಡೆಯುತ್ತಿದ್ದ ಹಲ್ಲೆ ತಡೆಯಲು ಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News