​ಜಾರ್ಖಂಡ್: ಅಂತಿಮ ಹಂತದ ಮತದಾನ ಆರಂಭ

Update: 2019-12-20 03:48 GMT

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಐದನೇ ಹಾಗೂ ಅಂತಿಮ ಹಂತದ ಮತದಾನ ಬಿಗಿ ಭದ್ರತೆ ನಡುವೆ ಶುಕ್ರವಾರ ಬೆಳಗ್ಗೆ 7ಕ್ಕೆ ಆರಂಭವಾಗಿದೆ. ಹದಿನಾರು ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಮುಖಂಡ ಹೇಮಂತ್ ಸೊರೇನ್ ಹಾಗೂ ರಾಜ್ಯದ ಇಬ್ಬರು ಸಚಿವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಸೊರೇನ್ ದುಮ್ಕಾ ಮತ್ತು ಬರೈತ್ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ದುಮ್ಕಾದಲ್ಲಿ ಸೊರೆನ್, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಲೂಯಿಸ್ ಮರಂಡಿಯವರಿಂದ ಬಿರುಸಿನ ಸ್ಪರ್ಧೆ ಎದುರಿಸುತ್ತಿದ್ದಾರೆ. ಬರೈತ್ ಕ್ಷೇತ್ರದಲ್ಲಿ ಕೇಸರಿ ಪಕ್ಷದ ಸಿಮೊನ್ ಮಾಲ್ಟೊ, ಸೊರೆನ್‌ಗೆ ಸ್ಪರ್ಧೆಯೊಡ್ಡಿದ್ದಾರೆ.

ಜಾರ್ಖಂಡ್ ಕೃಷಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಣಧೀರ್ ಸಿಂಗ್, ಸರತ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ವಿಯ ಕುಮಾರ್ ಚೌಬೆ ಹೇಳಿದ್ದಾರೆ. 19.55 ಲಕ್ಷ ಮಹಿಳೆಯರು ಸೇರಿದಂತೆ 40.05 ಲಕ್ಷ ಮಂದಿ ಮತದಾರರು 29 ಮಹಿಳೆಯರು ಸೇರಿದಂತೆ 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.

ಬೋರಿಯಾ, ಬರೈತ್, ಲಿಟಿಪಾರ, ಮಹೇಶ್‌ಪುರ ಮತ್ತು ಸಿಕಾರಿಪಾರ ಕ್ಷೇತ್ರಗಳಲ್ಲಿ ಮತದಾನ ಮಧ್ಯಾಹ್ನ 3ಕ್ಕೆ ಮುಕ್ತಾಯವಾಗ ಲಿದ್ದು, ಉಳಿದ ಕ್ಷೇತ್ರಗಳಲ್ಲಿ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇರುತ್ತದೆ. ಇತರ ನಾಲ್ಕು ಹಂತಗಳಂತೆ ಈ ಹಂತದಲ್ಲೂ ನಕ್ಸಲ್ ಪೀಡಿತ ಪ್ರದೇಶಗಳು ಸೇರಿದ್ದು, 396 ಮತಗಟ್ಟೆಗಳನ್ನು ಅತಿಸೂಕ್ಷ್ಮ ಹಾಗೂ 208 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.

ಭದ್ರತಾ ಕಾರಣಗಳಿಗಾಗಿ ಎಂಟು ಮತಗಟ್ಟೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಚೌಬೆ ವಿವರಿಸಿದ್ದಾರೆ.
28 ಮತಗಟ್ಟೆಗಳಿಗೆ ಈಗಾಗಲೇ ಸಿಬ್ಬಂದಿಯನ್ನು ವಿಮಾನದ ಮೂಲಕ ಕರೆದೊಯ್ಯಲಾಗಿದೆ. ಸಂಪರ್ಕ ಕೊರತೆ ಇರುವ 84 ಕಡೆಗಳಿಗೆ ಉಪಗ್ರಹ ಫೋನ್ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News