ಮಹೀಂದ್ರಾ ಗ್ರೂಪ್ ಅಧ್ಯಕ್ಷ ಸ್ಥಾನ ತ್ಯಜಿಸಲಿರುವ ಆನಂದ್ ಮಹೀಂದ್ರಾ

Update: 2019-12-20 15:42 GMT

ಮುಂಬೈ,ಡಿ.20: ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಆನಂದ್ ಮಹೀಂದ್ರಾ ಅವರು ಕೆಳಗಿಳಿಯಲಿದ್ದಾರೆ. 2020ರ ಎಪ್ರಿಲ್‌ನಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ತ್ಯಜಿಸುವುದಾಗಿ ಆನಂದ್ ಮಹೀಂದ್ರಾ ಪ್ರಕಟಿಸಿದ್ದಾರೆ. ಆದರೆ ಕಂಪೆನಿಯ ನಾನ್ ಎಕ್ಸಿಕ್ಯೂಟಿವ್ ಚೇರ್‌ಮನ್ ಹುದ್ದೆಯಲ್ಲಿ ಅವರು ಮುಂದುವರಿಯಲಿದ್ದಾರೆ.

ಕಂಪೆನಿಯ ಆಡಳಿತ ನಿರ್ದೇಶಕರಾಗಿ ಪವನ್ ಕುಮಾರ್ ಗೊಯೆಂಕಾ ಅವರನ್ನು ಸಂಸ್ಥೆಯು ಮರುನೇಮಕಗೊಳಿಸಿದೆ. ಗೋಯೆಂಕಾ ಅವರು ಒಂದು ವರ್ಷದ ಅವಧಿಗೆ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ಒಂದು ವರ್ಷದ ಅವಧಿಗೆ ವಹಿಸಿಕೊಳ್ಳಲಿದ್ದಾರೆ. ಗೋಯೆಂಕಾ ಅವರು ಎಪ್ರಿಲ್ 1ರಿಂದ ಅನ್ವಯವಾಗುವಂತೆ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಕಂಪೆನಿಯ ಆಡಳಿತ, ನಾಮಕರಣ ಹಾಗೂ ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಆಡಳಿತ ನಿರ್ದೇಶಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

 ಮುಂದಿನ ಹದಿನೈದು ತಿಂಗಳುಗಳಲ್ಲಿ ಕಂಪೆನಿಯ ಇನ್ನೂ ಹಲವು ಉನ್ನತ ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ನೂತನ ನೇಮಕಾತಿಗಳನ್ನು ಡಿಸೆಂಬರ್ 23ರಂದು ಪ್ರಕಟಿಸಲಾಗುವುದೆಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕಂಪೆನಿಯ ಉನ್ನತ ನಿರ್ವಹಣೆಯಲ್ಲಿನ ಬದಲಾವಣೆಯು ಶೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿದ್ದು, ಆಡಳಿತ ಮಂಡಳಿಯ ಸ್ವಾತಂತ್ರವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯ ಹೇಳಿಕೆಯೊಂದರಲ್ಲಿ ತಿಳಿಸಿದೆ.ಮಹೀಂದ್ರಾ ಆ್ಯಂಡ್ ಮಹೀಂದ್ರಾ ದೇಶದ ಹೆಸರಾಂತ ಮೋಟಾರು ವಾಹನ ಹಾಗೂ ಫಾರ್ಮಿಂಗ್ ಉದ್ಯಮಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News