ಮಾಲೆಗಾಂವ್: ಸಿಎಎ ವಿರುದ್ಧ ಮುಸ್ಲಿಮರು- ದಲಿತರಿಂದ ಪ್ರತಿಭಟನೆ

Update: 2019-12-20 17:46 GMT
ಫೊಟೋ ಕೃಪೆ: indianexpress

ಹೊಸದಿಲ್ಲಿ,ಡಿ.20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಮಾಲೆಗಾಂವ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ದಲಿತರು ಹಾಗೂ ಮುಸ್ಲಿಮರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು. ದಸ್ತೂರ್ ಬಚಾವೊ ಸಮಿತಿ (ಸಂವಿಧಾನ ರಕ್ಷಿಸಿ ಸಮಿತಿ) ಹಾಗೂ ವಂಚಿತ್ ಬಹುಜನ್ ಅಗಾಡಿ (ವಿಬಿಎ) ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ (ಆರ್‌ಪಿಐ) ಪ್ರತಿಭಟನೆಗೆ ಕರೆ ನೀಡಿದ್ದವು.

ಬೆಳಗ್ಗೆ 10 ಗಂಟೆಗೆ ಮಾಲೆಗಾಂವ್ ಕೋಟೆಯಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಮೂರು ತಾಸುಗಳ ಕಾಲ ನಡೆದು, ಶಹಿದೊನ್ ಕಿ ಯಾದ್‌ಘರ್ ಸ್ಮಾರಕದ ಬಳಿಕ ಸಮಾಪನಗೊಂಡಿತು. ಭಾರೀ ಸಂಖ್ಯೆಯಲ್ಲಿ ದಲಿತರು ಹಾಗೂ ಮುಸ್ಲಿಮರು ಪಾಲ್ಗೊಂಡಿದ್ದುದು ಈ ರ್ಯಾಲಿಯ ವಿಶೇಷತೆಯಾಗಿತ್ತು. ಜವಳಿ ಉದ್ಯಮಕ್ಕೆ ಖ್ಯಾತವಾಗಿರುವ ಮಾಲೆಗಾಂವ್‌ನಲ್ಲಿರುವ ಹತ್ತಿಗಿರಣಿಗಳ ಸಾವಿರಾರು ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ದಸ್ತೂರ್ಬಚಾವೋ ಸಮಿತಿಯ ಸಂಚಾಲಕ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನಾ ಮೆಹಫೂಝ್ ರಹ್ಮಾನಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ‘‘ಡಿಸೆಂಬರ್ 19ರಂದು ಐತಿಹಾಸಿಕ ದಿನವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಅಶ್ಫಖುಲ್ಲಾ ಖಾನ್ ಹಾಗೂ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು ನೇಣಿಗೇರಿಸಿದ ದಿನ ಇದಾಗಿದೆ. ನಾವು ಅವರ ವಂಶಜರಾಗಿದ್ದೇವೆ. ಒಂದು ವೇಳೆ ಅಗತ್ಯವಿದ್ದಲ್ಲಿ ದೇಶವನ್ನು ಉಳಿಸಲು ನಾವು ಬಲಿದಾನಕ್ಕೂ ಸಿದ್ಧರಿದ್ದೇವೆ’’ ಎಂದು ರಾಮಾನಿ ತಿಳಿಸಿದರು.

 ವಿಬಿಎ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, ‘‘ ಪೌರತ್ವ ತಿದ್ದುಪಡಿ ಕಾಯ್ದೆ ಎಂಬುದು ಕೇವಲ ಒಂದು ಕಣ್ಣೊರೆಸುವ ತಂತ್ರವಾಗಿದೆ.ಎನ್‌ಆರ್‌ಸಿಯು ಭಾರೀ ಆತಂಕವನ್ನು ಮೂಡಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News