×
Ad

ಉತ್ತರ ಪ್ರದೇಶ ಹಿಂಸಾಚಾರ : ಮೃತರ ಸಂಖ್ಯೆ 11ಕ್ಕೆ ಏರಿಕೆ

Update: 2019-12-21 09:07 IST

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರ ಪ್ರದೇಶದಲ್ಲಿ ಸತತ ಎರಡನೇ ದಿನ ಕೂಡಾ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದ್ದು, ಕನಿಷ್ಠ 11 ಮಂದಿ ಜೀವ ಕಳೆದುಕೊಂಡಿದ್ದಾರೆ.

ಶುಕ್ರವಾರ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ 10 ಮಂದಿ ಮೃತಪಟ್ಟಿದ್ದು, ಗುರುವಾರ ಪೊಲೀಸ್ ಗುಂಡಿಗೆ ಒಬ್ಬ ಬಲಿಯಾಗಿದ್ದ. ಇದರಿಂದ 48 ಗಂಟೆಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 11ಕ್ಕೇರಿದೆ.

ಆಯಾ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಲಭೆಯಲ್ಲಿ ಮೃತಪಟ್ಟವರ ಶವಗಳನ್ನು "ಟೈಮ್ಸ್ ಆಫ್ ಇಂಡಿಯಾ" ವರದಿಗಾರರು ಎಣಿಕೆ ಮಾಡಿದ್ದರೂ, ಡಿಜಿಪಿ ಪಿ.ವಿ.ರಾಮಶಾಸ್ತ್ರಯವರು ಮಾತ್ರ ಹಿಂಸೆಯಲ್ಲಿ ಮೃತಪಟ್ಟವರ ಸಂಖ್ಯೆ ಕೇವಲ ಆರು ಎಂದು ಪ್ರತಿಪಾದಿಸಿದ್ದಾರೆ. ಗುಂಡೇಟಿನಿಂದ ಇಷ್ಟೊಂದು ಮಂದಿ ಜೀವ ಕಳೆದುಕೊಂಡು ಮತ್ತೆ ಹಲವರು ಗಾಯಗೊಂಡಿದ್ದರೂ, ಪೊಲೀಸರು ಎಲ್ಲೂ ಒಂದು ಗುಂಡು ಕೂಡಾ ಹಾರಿಸಿಲ್ಲ ಎಂದು ಡಿಜಿಪಿ ಹೇಳಿಕೊಂಡಿದ್ದಾರೆ.

ವಡೋದರ ಹಾಗೂ ಜಬಲ್ಪುರದಲ್ಲಿ ಕೂಡಾ ಹಿಂಸಾಚಾರ ಸಂಭವಿಸಿದೆ. ದೇಶಾದ್ಯಂತ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿದ್ದು, ಹೊಸ ಪ್ರದೇಶಗಳಲ್ಲಿ ಶಾಂತಿಯುತ ಪ್ರತಿಭಟನೆ ಮುಂದುವರಿದಿದೆ. ಹಲವು ನಗರ ಹಾಗೂ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಶನಿವಾರ ಕೂಡಾ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೊಲೀಸರು ವಿಧಿಸಿದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶುಕ್ರವಾರ ಪ್ರತಿಭಟನಾಕಾರರು ಬೀದಿಗಿಳಿದಾಗ ಹಲವೆಡೆಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ.

ಮೀರಠ್‌ನಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ನಾಲ್ಕು ಮಂದಿ ಮೃತಪಟ್ಟಿರುವುದನ್ನು ಮೀರಠ್ ವೈದ್ಯಕೀಯ ಶಿಕ್ಷಣ ಕಾಲೇಜು ದೃಢಪಡಿಸಿದೆ. ಬಿಜನೋರ್‌ನಲ್ಲಿ ಎರಡು, ಮುಝಾಫರ್‌ನಗರ, ಫಿರೋಝಾಬಾದ್, ಸಂಭಾಲ್ ಹಾಗೂ ಕಾನ್ಪುರದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಲಕ್ನೋ ಶುಕ್ರವಾರ ಬಹುತೇಕ ಶಾಂತವಾಗಿತ್ತು.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಿಎಎ ವಿರುದ್ಧ ಪ್ರತಿಭಟನೆಗೆ ಇಳಿದ ಹಿನ್ನೆಲೆಯಲ್ಲಿ 72 ದಿನಗಳ ನಿಷೇಧಾಜ್ಞೆ ವಿಧಿಸಲಾಗಿದೆ. ವಾರಣಾಸಿಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ನಡೆದ ಕಾಲ್ತುಳಿತದಲ್ಲಿ 10 ವರ್ಷದ ಬಾಲಕ ಸೇರಿದಂತೆ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News