×
Ad

ಹಿಂಸಾಚಾರದಲ್ಲಿ ಪಿತೂರಿ ಆರೋಪ ಹೊರಿಸಿ ‘ದಿ ಹಿಂದೂ’ ಪತ್ರಕರ್ತನ ಬಂಧನ, ಬಿಡುಗಡೆ

Update: 2019-12-21 13:00 IST

ಲಕ್ನೋ, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಲಕ್ನೋದಲ್ಲಿ ನಡೆದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ಬಲಿಯಾಗಿದ್ದು, ಹಿಂಸಾಚಾರಕ್ಕೆ ಪಿತೂರಿ ನಡೆಸಿದ್ದಾರೆಂಬ ಆರೋಪ ಹೊರಿಸಿ ‘ದಿ ಹಿಂದೂ’ ದಿನಪತ್ರಿಕೆಯ ಲಕ್ನೋದ ವರದಿಗಾರನನ್ನು ಲಕ್ನೋ ಪೊಲೀಸರು ನಗರದ ರೆಸ್ಟೋರೆಂಟ್‌ನಲ್ಲಿ ಬಂಧಿಸಿ ಸುಮಾರು ಎರಡು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು. ಬಳಿಕ ಬಿಡುಗಡೆ ಮಾಡಿದ್ದಾರೆ.

‘ದಿ ಹಿಂದೂ’ ಆಂಗ್ಲ ದಿನಪತ್ರಿಕೆಯ ಉತ್ತರಪ್ರದೇಶದ ವರದಿಗಾರನಾಗಿರುವ ಉಮರ್ ರಶೀದ್ ಘಟನೆಯ ಬಗ್ಗೆ ವಿವರಿಸುತ್ತಾ,‘‘ನನ್ನ ಸ್ನೇಹಿತನ ಜೊತೆಗೆ ಸ್ಥಳೀಯ ರೆಸ್ಟೊರೆಂಟ್‌ನಲ್ಲಿ ಬೇರೊಬ್ಬರ ವೈಫೈ ಬಳಸಿಕೊಂಡು ವರದಿ ತಯಾರಿಕೆಯಲ್ಲಿ ವ್ಯಸ್ತನಾಗಿದ್ದೆ. ಸಾದಾ ಉಡುಪು ಧರಿಸಿ ನಮ್ಮ ಬಳಿ ಬಂದ ನಾಲ್ಕರಿಂದ ಐದು ಮಂದಿ ನನ್ನ ಸ್ನೇಹಿತನನ್ನು ವಿಚಾರಣೆ ನಡೆಸಲಾರಂಭಿಸಿದರು. ಪರಿಚಯ ಹೇಳುವಂತೆ ಒತ್ತಾಯಿಸಿದರು. ನನ್ನ ಪರಿಚಯವನ್ನು ಕೇಳಿದರು. ಬಳಿಕ ನನ್ನ ಸ್ನೇಹಿತನನ್ನು, ನನ್ನನ್ನು   ಅವರ ಜೀಪ್‌ನಲ್ಲಿ ಕರೆದುಕೊಂಡು ಹೋದರು. ನಾನು ಪತ್ರಕರ್ತ ಎಂದು ಪರಿಚಯಿಸಿಕೊಂಡೆ’’ ಎಂದರು.

 ‘‘ಪೊಲೀಸರು ನಮ್ಮನ್ನು ರೂಮ್‌ನಲ್ಲಿ ಬಂಧಿಸಿಟ್ಟರು.ನನ್ನ ಫೋನ್‌ನ್ನು ವಶಪಡಿಸಿಕೊಂಡರು. ನನ್ನ ಸ್ನೇಹಿತನನ್ನು ನಿರ್ದಯವಾಗಿ ಥಳಿಸಿದ್ದರು. ಪೊಲೀಸರು ನನ್ನನ್ನು ಹಿಂಸಾಚಾರಕ್ಕೆ ಸಂಬಂಧ ಕಲ್ಪಿಸಿ, ಪ್ರಮುಖ ಸಂಚುಕೋರ ಎಂದು ಹೇಳಿದರು. ಕಾಶ್ಮೀರಿಗಳ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಲಾರಂಭಿಸಿದರು. ಮತ್ತೊಮ್ಮೆ ಪೊಲೀಸ್ ಜೀಪ್‌ನಲ್ಲಿ ನನ್ನನ್ನು ಔಟ್‌ಪೋಸ್ಟ್‌ಗೆ ಕರೆದೊಯ್ಯಲಾಯಿತು. ಇನ್ನೊಬ್ಬ ಪೊಲೀಸ್ ನನಗೆ ಕೋಮು ನಿಂದನೆ ಮಾಡಿದ್ದ. ನನ್ನ ಗಡ್ಡವನ್ನು ಬೋಳಿಸುವುದಾಗಿಯೂ ಹೇಳಿದ್ದ''ಎಂದು ಉಮರ್ ಹೇಳಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ಹಾಗೂ ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಸಿಂಗ್‌ಗೆ ಕರೆ ಮಾಡಿದ ಬಳಿಕ ಉಮರ್ ರಶೀದ್‌ರನ್ನು ಬಿಡುಗಡೆಗೊಳಿಸಲಾಯಿತು. ಪತ್ರಕರ್ತನ ಬಂಧನ ಬಗ್ಗೆ ಎನ್‌ಡಿಟಿವಿ, ಉತ್ತರಪ್ರದೇಶ ಪೊಲೀಸ್ ಮಹಾ ನಿರ್ದೇಶಕರ ಗಮನ ಸೆಳೆದಾಗ, ಈ ವಿಚಾರದ ಕಡೆಗೆ ನಾನು ಗಮನ ಹರಿಸುವೆ ಎಂದಿದ್ದರು. ರಶೀದ್‌ರನ್ನು ಬಿಡುಗಡೆಗೊಳಿಸುವಂತೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News