ಇನ್ನು ಬ್ಯಾಂಕುಗಳ ಕೆವೈಸಿ ಫಾರ್ಮ್ ಗಳಲ್ಲಿ ಗ್ರಾಹಕ ಧರ್ಮವನ್ನೂ ನಮೂದಿಸಬೇಕು: ವರದಿ

Update: 2019-12-21 10:24 GMT

ಬೆಂಗಳೂರು: ಗ್ರಾಹಕರು ತಮ್ಮ ಧರ್ಮವನ್ನು ನಮೂದಿಸಬೇಕಾಗಿರುವ ಹೊಸ ಕಲಂ ಹೊಂದಿರುವ ಕೆವೈಸಿ ಫಾರ್ಮುಗಳನ್ನು ಬ್ಯಾಂಕುಗಳು ಸದ್ಯದಲ್ಲಿಯೇ ಹೊರತರುವ ಸಾಧ್ಯತೆಯಿದೆ. ಫೆಮಾ ಕಾಯಿದೆಯ ನಿಯಮಾವಳಿಗಳಿಗೆ ಇತ್ತೀಚೆಗೆ ಮಾಡಲಾದ ಮಾರ್ಪಾಟುಗಳ ಹಿನ್ನೆಲೆಯಲ್ಲಿ ಇದು ಅಗತ್ಯವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ (ಹಿಂದುಗಳು, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು ಹಾಗೂ ಪಾರ್ಸಿ) ಸೇರಿದ ವಲಸಿಗರಿಗೆ ಭಾರತದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಹಾಗೂ ಆಸ್ತಿ ಖರೀದಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ಬದಲಾಯಿಸಿರುವುದರಿಂದ ಇದು ಅಗತ್ಯವಾಗಿದೆ. ಈ ಸೌಲಭ್ಯ ನಾಸ್ತಿಕರಿಗೆ, ಮುಸ್ಲಿಂ ವಲಸಿಗರಿಗೆ ಹಾಗೂ ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಟಿಬೆಟಿನವರಿಗೆ ಲಭ್ಯವಿಲ್ಲ.

ವಲಸಿಗರ ಪೈಕಿ ಆಯ್ದವರಿಗೆ ಮಾತ್ರ ಬ್ಯಾಂಕ್ ಖಾತೆ ಯಾ ಆಸ್ತಿ ಖರೀದಿಗೆ ಅನುಮತಿಯಿರುವುದರಿಂದ  ಬ್ಯಾಂಕುಗಳು ಕೆವೈಸಿಯಲ್ಲಿ  ಗ್ರಾಹಕರಿಗೆ ತಮ್ಮ ಧರ್ಮವನ್ನು ನಮೂದಿಸಲು ಹೇಳಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪೌರತ್ವ ತಿದ್ದುಪಡಿ ಕಾಯಿದೆ 2019ರಲ್ಲಿರುವಂತೆಯೇ ಫೆಮಾ ನಿಯಮಾವಳಿಗಳಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬದಲಾವಣೆಗಳನ್ನು ಕಳೆದ ವರ್ಷ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಯಾವುದೇ ಧರ್ಮದ ವಿದೇಶಿ ನಾಗರಿಕರು ಎಫ್‍ಎ ಖಾತೆಗಳನ್ನು  ದೀರ್ಘಾವಧಿಗೆ ಹಾಗೂ ಎನ್‍ಆರ್‍ಒ ಖಾತೆಗಳನ್ನು ಆರು ತಿಂಗಳ ಅವಧಿಗೆ ತೆರೆಯಬಹುದಾಗಿತ್ತು. ಈ ಹಿಂದಿನ ನಿಯಮದಂತೆ ಭಾರತದಲ್ಲಿ ಆರು ತಿಂಗಳಿಗೂ ಹೆಚ್ಚು ಸಮಯದಿಂದ ವಾಸಿಸುತ್ತಿರುವ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಚೀನಾ, ಇರಾನ್, ನೇಪಾಳ ಹಾಗೂ ಭೂತಾನದ ನಾಗರಿಕರಲ್ಲದವರು ಆಸ್ತಿ ಖರೀದಿಸಬಹುದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News